ಸಾರಾಂಶ
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಕಲಿ ಜಾತಿ ಪ್ರಮಾಣಪತ್ರವನ್ನು ಹೊಂದಿದವರಿದ್ದು, ಅವರನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ ಹೊನ್ನಾವರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪಾರ್ಲಿಮೆಂಟರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಡಾ. ಫಗ್ಗನ್ ಸಿಂಘ್ ಕುಲಸ್ತೆ ಅವರಿಗೆ ಮನವಿ ಸಲ್ಲಿಸಲಾಯಿತು.
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಕಲಿ ಜಾತಿ ಪ್ರಮಾಣಪತ್ರವನ್ನು ಹೊಂದಿದವರಿದ್ದು, ಅವರನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ ಹೊನ್ನಾವರದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪಾರ್ಲಿಮೆಂಟರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಡಾ. ಫಗ್ಗನ್ ಸಿಂಘ್ ಕುಲಸ್ತೆ ಅವರಿಗೆ ಮನವಿ ಸಲ್ಲಿಸಲಾಯಿತು.
ಡಾ. ಫಗ್ಗನ್ ಸಿಂಘ್ ಕುಲಸ್ತೆ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಘ್ ಅವರಿಗೆ ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಮನವಿ ನೀಡಿದರು. ೧೯೭೬ರಲ್ಲಿ ಪ್ರದೇಶ ನಿರ್ಬಂಧದ ಆದೇಶವನ್ನು ತೆಗೆದು ಹಾಕಿದಾಗಿನಿಂದ ನಕಲಿ ವ್ಯಕ್ತಿಗಳು ತಮ್ಮ ಸಮಾನಾರ್ಥಕ ಹೆಸರನ್ನು ಬಳಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ನಕಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದು, ಇದರಿಂದ ಅಸಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಅನ್ಯಾಯವಾಗಿದೆ. ಉತ್ತರ ಕನ್ನಡದ ಸಕ್ಷಮ ಅಧಿಕಾರಿಗಳು ಸರಿಯಾದ ಪರಿಶೀಲನೆಯಿಲ್ಲದೆ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸದೇ ಮಾಧುರಿ ಪಾಟೀಲ್ ಮತ್ತು ಇತರ ಕಮಿಷನರ್ ಬುಡಕಟ್ಟು ಅಭಿವೃದ್ಧಿ ಮತ್ತು ಇತರರು ೧೯೯೪ ಎಸ್‌ಸಿಸಿ (೬)೨೪ ಅದೇಶ ಇದ್ದರೂ ೨೦೦೮ರಿಂದ ನಿಜವಾದ ದಲಿತ ಸಂಘಟನೆಗಳ ಸತತ ಪ್ರತಿಭಟನೆ ಮತ್ತು ಆಂದೋಲನಗಳಿಂದ ನಕಲಿ ಜಾತಿಗಳಿಗೆ ಜಾತಿ ಪ್ರಮಾಣಪತ್ರವನ್ನು ನೀಡುವುದನ್ನು ಜಿಲ್ಲಾಡಳಿತ ನಿಲ್ಲಿಸಿದೆ. ಕೆಲವರು ನಕಲಿ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಮತ್ತು ನಿಜವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆಂದು ಬಿಂಬಿಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಕೇಂದ್ರದ ಅಧಿಕಾರಿಗಳನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ತಮ್ಮ ತೀವ್ರ ವಿರೋಧವಿದೆ. ಕರ್ನಾಟಕದ ನಿಜವಾದ ಎಸ್‌ಸಿ ಮತ್ತು ಎಸ್‌ಟಿಗಳ ಮನಸ್ಸಿನಲ್ಲಿ ಗೊಂದಲಕ್ಕೆ ಕಾರಣವಾಗುವ ಇಂತಹ ಅಸಂವಿಧಾನಿಕ ಪ್ರೇರಣೆಗಳನ್ನು ತಪ್ಪಿಸಬೇಕೆಂದೂ ಮನವಿಯಲ್ಲಿ ತಿಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೩೫ ಭಿನ್ನ ಜಾತಿಗಳಿದ್ದು, ಸುಮಾರು ೩ ಲಕ್ಷದಷ್ಟು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ ಮತ್ತು ಸಂವಿಧಾನಿಕ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ಪರಿಶಿಷ್ಟರಲ್ಲದವರು ನಿಜವಾದ ಪರಿಶಿಷ್ಟ ಜಾತಿಗಳ ಮತ್ತು ಬುಡಕಟ್ಟುಗಳ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ದೃಷ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆಂದು ಬಿಂಬಿಸುವ ಅವರ ಪ್ರಯತ್ನಗಳು ಮುಂದುವರಿದಿದ್ದು, ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಪ್ರಮಾಣಪತ್ರ ನೀಡಿ ಅಧಿಕಾರಿಗಳಿಂದ ಕ್ಯಾಟ್-೧ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಸರ್ಕಾರಗಳು ಇಂತಹ ದಾರಿ ತಪ್ಪಿಸುವವರಿಂದ ದೂರ ಇರಬೇಕು ಎಂದೂ ಅವರು ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ತುಳಸಿದಾಸ ಪವಾಸ್ಕರ, ವಕೀಲ ರವೀಂದ್ರ ಮುಂತಾದವರಿದ್ದರು.