ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ಬಲಗೈ ಸಮುದಾಯದ ಒಕ್ಕೂಟದಿಂದ ಮಾ.25ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಕ್ಕೊತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾದ ಮುಖಂಡ ಬಿ.ಡಿ.ಸಾವಕ್ಕನವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿ ರಾಜ್ಯ ಬಲಗೈ ಸಮುದಾಯದ ಒಕ್ಕೂಟದಿಂದ ಮಾ.25ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಕ್ಕೊತ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾದ ಮುಖಂಡ ಬಿ.ಡಿ.ಸಾವಕ್ಕನವರ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಳಮೀಸಲಾತಿ ಹಂಚಿಕೆ ವಿಚಾರವಾಗಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ರೋಸ್ಟರ್ ಪದ್ಧತಿಯಲ್ಲಿ ಬದಲಾವಣೆ ಮಾಡಿ ಎಲ್ಲರಿಗೂ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಒಳಮೀಸಲಾತಿ ನಿಲುವಿನಲ್ಲಿ ಶೇ.17 ಮಾಡಿದ್ದು, ಆದರೆ ಕರ್ನಾಟಕ ಉಚ್ಛನ್ಯಾಯಾಲಯವು ಇದನ್ನು ಶೇ.50ಕ್ಕಿಂತ ಮೀಸಲಾತಿಯನ್ನು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆದೇಶಿಸಿದ್ದ ಪ್ರಕಾರ ಶೇ.50ಕ್ಕೆ ಸೀಮಿತಗೊಳಿಸಿದ್ದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.15ರಷ್ಟು ಮಾತ್ರ ದೊರೆಯುತ್ತದೆ. ಈ ಸದರಿ ಶೇ.15ರ ಕರ್ನಾಟಕ ಸರ್ಕಾರವು 101 ಜಾತಿಯಲ್ಲಿನ ಒಳಮೀಸಲಾತಿಯಾಗಿ ಹಂಚಿಕೆ ಮಾಡಬೇಕಾಗಿದೆ. ಆದರೆ ಸರ್ಕಾರವು ವಿಳಂಬ ನೀತಿ ಅನುಸರಿಸಿ ಅಸ್ಪೃಶ್ಯರಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿದ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದರು.

ನಮ್ಮ ರಾಜ್ಯದಲ್ಲಿ ಅಸ್ಪೃಶ್ಯರಂದರೆ ಹೊಲೆಯ, ಮಾದಿಗರ ನಿಜವಾದ ಅಸ್ಪೃಶ್ಯರು ಫಲಾನುಭವಿಗಳಾಗಿರುತ್ತಾರೆ. ಇಲ್ಲಿಯವರೆಗೆ ಈ ಜಾತಿಗಳಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಅಸ್ಪೃಶ್ಯರು ಎಲ್ಲರೂ ಒಂದಾಗಿ ಹೋರಾಟ ನಡೆಸಿ ರಾಜ್ಯ ಸರ್ಕಾರದಿಂದ ನ್ಯಾಯ ಪಡೆಯುವ ದಿಸೆಯಲ್ಲಿ ನಮ್ಮ ಹೋರಾಟ ನಡೆಸಿ ಈ ನಿಲುವನ್ನು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ನಮ್ಮ ಜಿಲ್ಲಾ ಸಮಾಜದ ನಿಲುವನ್ನು ತಿಳಿಸಬೇಕಾಗಿದೆ ಎಂದರು.

ಹೊಲೆಯ-ಛಲವಾದಿ ತತ್ಸಮಾನಾಂತರ ಬಲಗೈ ಸಮಾಜಕ್ಕೆ ಒಳಮೀಸಲಾತಿಯಲ್ಲಿ ನ್ಯಾಯಸಮ್ಮತವಾದ ಹಂಚಿಕೆಯಾಗಬೇಕೆಂಬುದೇ ನಮ್ಮ ಹಕ್ಕೊತ್ತಾಯ. ಈ ಹಿಂದೆ ಸರ್ಕಾರಿ ಆದೇಶದ ಒಳಮೀಸಲಾತಿ ಅನ್ವಯ ಬಿಂದುಗಳನ್ನು ನಿಗದಿಪಡಿಸಿದಲ್ಲಿ 1,9,13 ಈ ರೀತಿಯಾಗಿ ಅವೈಜ್ಞಾನಿಕವಾಗಿ ಮಾಡಿದ್ದು, ಎಲ್ಲಾ 101 ಜಾತಿಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಆದ್ದರಿಂದ ಸದರಿ ಅಸಮಾನತೆಯಲ್ಲಿ ನಿಗದಿಪಡಿಸಿರುವ ಅಂಶಗಳು ಮರುಕಳಿಸಬಾರದಾಗಿ ನಮ್ಮ ಮನವಿ ಹಾಗೂ ನಮ್ಮ ಹೋರಾಟವು ಯಾವುದೇ ಸಹೋದರ ಜಾತಿಗಳ ವಿರುದ್ಧ ಇರುವುದಿಲ್ಲ. ಎಲ್ಲಾ ಅಸ್ಪೃಶ್ಯ ಬಂಧುಗಳು ಇಲ್ಲಿಯವರೆಗೆ ಹೇಗೆ ಸಹೋದರರಂತೆ ಇದ್ದೇವೋ ಹಾಗೆ ಉಳಿಯಬೇಕೆಂದು ನಮ್ಮ ಸಮಾಜದ ನಿಲುವು. ನ್ಯಾ. ನಾಗಮೋಹನ್‍ದಾಸ್ ಆಯೋಗದ ವರದಿಯಲ್ಲಿನ ಅಂಶಗಳು ಪರಿಶಿಷ್ಟ ಜಾತಿಯ ಬಲಗೈ ಸಮಾಜದ ತತ್ಸಮಾನ ಜಾತಿಗಳಿಗೆ ನ್ಯಾಯಬದ್ಧವಾಗಿ ಗಣತಿಯಾಗದೆ ಅನ್ಯಾಯವಾಗಿದೆ. ಸರ್ಕಾರವು ಈ ನ್ಯೂನ್ಯತೆಯನ್ನು ಸರಿಪಡಿಸಿ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಮಾ.25ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ರಾಜ್ಯದಿಂದ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಶಿವಮೊಗ್ಗ ಜಿಲ್ಲೆಯಿಂದಲೂ ಸಹ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಕುಮಾರಸ್ವಾಮಿ, ಗೌರವಾಧ್ಯಕ್ಷ ಎಚ್.ಸಿದ್ದಪ್ಪ, ಉಪಾಧ್ಯಕ್ಷೆ ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ಡಿ.ಕಾಂತರಾಜ್ ಇನ್ನಿತರರು ಉಪಸ್ಥಿತರಿದ್ದರು.