ಚಿಕ್ಕಮಗಳೂರುಸರ್ಕಾರ ನಿಯೋಜಿಸಿರುವ ಎಸ್ಐಟಿ ಅಧಿಕಾರಿಗಳಾದ ವಿಎ, ಆರ್ ಐ, ಸರ್ವೇಯರ್, ಅರಣ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಗ್ರಾಪಂ ಪಿಡಿಒ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯ ನಿವೇಶನ ಇತ್ಯಾದಿಗಳಿಗೆ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನ ಸಂಖ್ಯೆ ಆಧರಿಸಿ ನಾಗರಿಕರ ಅಗತ್ಯಗಳಿಗೆ ಭೂಮಿ ಮೀಸಲಿಡಬೇಕು. ಜತೆಗೆ ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯರು ನಗರದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ನಾಗರಿಕ- ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸರ್ಕಾರ ನಿಯೋಜಿಸಿರುವ ಎಸ್ಐಟಿ ಅಧಿಕಾರಿಗಳಾದ ವಿಎ, ಆರ್ ಐ, ಸರ್ವೇಯರ್, ಅರಣ್ಯಾಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಗ್ರಾಪಂ ಪಿಡಿಒ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿ ರೈತರ ಭೂಮಿ, ಶಾಲೆ, ಆಟದ ಮೈದಾನ, ಸ್ಮಶಾನ, ಆಶ್ರಯ ನಿವೇಶನ ಇತ್ಯಾದಿಗಳಿಗೆ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನ ಸಂಖ್ಯೆ ಆಧರಿಸಿ ನಾಗರಿಕರ ಅಗತ್ಯಗಳಿಗೆ ಭೂಮಿ ಮೀಸಲಿಡಬೇಕು. ಜತೆಗೆ ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯರು ನಗರದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್, ಚಿಕ್ಕಮ ಗಳೂರಿನಲ್ಲಿ ಸಾವಿರಾರು ಹೆಕ್ಟೇರ್ ರೈತರ ಭೂಮಿಗಳು, ಗ್ರಾಮಗಳು ಅರಣ್ಯ ಮತ್ತು ಕಂದಾಯ ಇಲಾಖೆ ನಿರ್ಲಕ್ಷ್ಯದಿಂದ ಹತ್ತಾರು ವರ್ಷಗಳಿಂದ ಸಮಸ್ಯೆಯಲ್ಲಿವೆ. ಈ ಸಮಸ್ಯೆ ಪರಿಹರಿಸುವಂತೆ ಒತ್ತಯಿಸಿ ಹಲವಾರು ಚಳವಳಿಗಳು, ಸಮಾವೇಶ ಗಳು ಹಾಗೂ ಅಧಿಕಾರಿಗಳು, ಸಚಿವರೊಂದಿಗೆ ಸಮಾಲೋಚಿಸಿದ್ದರ ಪ್ರತಿಫಲವಾಗಿ ಹಲವಾರು ಆದೇಶಗಳನ್ನು ಸರ್ಕಾರ ಹೊರಡಿಸಿದೆ.ಜನರ ಅನುಕೂಲಕ್ಕಾಗಿ ಕಾನೂನುಬದ್ಧ ನಿಯಮ ಜಾರಿಗೆ ತಂದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಜೀವಂತವಾಗಿ ಉಳಿದಿವೆ ಎಂದು ದೂರಿದರು.
ಡೀಮ್ಡ್ ಫಾರೆಸ್ಟ್ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಸ್ಪಷ್ಟ ನಿರ್ದೇಶನದ ಮೇಲೆ ಎಸ್.ಐ.ಟಿ. ರಚನೆ ಯಾಗಿದ್ದರೂ ಸಹ ನಿಯಮಾನುಸಾರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವಲ್ಲಿ ವಿಳಂಬ ಮಾಡುವ ಮೂಲಕ ಮತ್ತೊಮ್ಮೆ ಜನ, ಜನವಸತಿ ಮತ್ತು ರೈತರ ಭೂಮಿಗಳು ಸೇರಿದಂತೆ ತರಾತುರಿಯಲ್ಲಿ ಡೀಮ್ಡ್ ಫಾರೆಸ್ಟ್ ಪಟ್ಟಿ ಮಾಡಿ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಅಪಾಯಗಳು ಗೋಚರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಹತ್ತಾರು ವರ್ಷಗಳ ಪೋಡಿ ಸಮಸ್ಯೆಸರಿಪಡಿಸಲು ಈಗಾಗಲೇ ಭೌತಿಕವಾಗಿ ತಯಾರಿಸಲಾದ ನಮೂನೆ 1- 5 ಕೈ ಬಿಟ್ಟು ಇ-ಪ್ರಕ್ರಿಯೆ, ಆನ್‌ಲೈನ್ ಮೂಲಕ ತಾಲೂಕು ಕಚೇರಿಯಿಂದ ಸ್ವಯಂ ಪ್ರೇರಿತ ನಮೂನೆ 1- 5 ರಚಿಸಿ ಪೋಡಿ ಮಾಡಲು ಆದೇಶವಿದೆ. ಈ ಪ್ರಯುಕ್ತ ಸುಮಾರು 840 ಸರ್ವೆನಂಬರ್‌ಗಳ ನಮೂನೆ 1 ರಿಂದ 5 ಪ್ರಕ್ರಿಯೆ ಅರಣ್ಯ ಇಲಾಖೆ ಒಪ್ಪಿಗೆ ಪಡೆಯಲು ಡಿಎಫ್‌ಓ ಅವರ ಬಳಿ 6ತಿಂಗಳಿಂದ ಬಾಕಿ ಇವೆ. ಇದರೊಂದಿಗೆ ಜಂಟಿಸರ್ವೆಗೆ ತಾಲೂಕು ಕಚೇರಿಯಿಂದ ಆದೇಶಿಸಿ ಹಲವರು ತಿಂಗಳು ಕಳೆದರೂ ಈವರೆಗೆ ಯಾವುದೇ ಕಡತದ ಸಮೀಕ್ಷೆ ಅಂತಿಮಗೊಳಿಸಿ ವರದಿನೀಡಿಲ್ಲವೆಂಬ ಮಾಹಿತಿ ಇದೆ ಎಂದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ವಾಸೂಪೂಜಾರಿ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಕೆ.ಕೆ.ರಘು, ಮೈಲಿ ಮನೆ ಪೂರ್ಣೇಶ್, ಕರ್ನಾಟಕ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮಾಜಿ ಅಧ್ಯಕ್ಷ ಬಿ.ಸಿ.ಜಯರಾಮ್, ಜಿಲ್ಲಾ ಬೆಳೆ ಗಾರ ಒಕ್ಕೂಟದ ಅಧ್ಯಕ್ಷ ರತೀಶ್, ಕಾರ್ಯದರ್ಶಿ ಮಹೇಶ್ ಕೆರೆಮಕ್ಕಿ, ಮುಖಂಡರಾದ ಆಲ್ದೂರು ಸುರೇಶ್, ಕನ್ನಡಪರ ಸಂಘಟನೆಯ ಪಿ.ಸಿ.ರಾಜೇಗೌಡ ಇದ್ದರು.