ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹ

| Published : Oct 07 2025, 01:03 AM IST

ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್, ಕ್ರಿಕೆಟ್‌ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇವುಗಳಿಗೆ ಅ.16ರ ಒಳಗಾಗಿ ಕಡಿವಾಣ ಹಾಕದಿದ್ದರೆ ಅಂದೇ ನೊಂದ ಮಹಿಳೆಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಎಚ್ಚರಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್, ಕ್ರಿಕೆಟ್‌ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇವುಗಳಿಗೆ ಅ.16ರ ಒಳಗಾಗಿ ಕಡಿವಾಣ ಹಾಕದಿದ್ದರೆ ಅಂದೇ ನೊಂದ ಮಹಿಳೆಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಎಚ್ಚರಿಸಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿ ರಾಜಾರೋಷವಾಗಿ ನಡೆಯುತ್ತಲೇ ಇವೆ. ಅಧಿಕಾರಿಗಳು ಇವುಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ. ಅ.16ರ ಒಳಗಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮಟ್ಕಾ ಜೂಜಾಟ, ಅಂದರ್ ಬಾಹರ್ ಇಸ್ಪೀಟ್ ಕ್ಲಬ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಬೇಕು. ಹಳ್ಳಿ ಮತ್ತು ನಗರಗಳಲ್ಲಿರುವ ಮನೆಗಳಲ್ಲಿ, ಎಗ್ ರೈಸ್ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ತಕ್ಷಣ ಬಂದ್ ಮಾಡಿಸಬೇಕು. ಅಕ್ರಮ ಗಣಿಗಾರಿಕೆ ಮತ್ತು ರಾತ್ರಿ ವೇಳೆ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಟ ನಿಲ್ಲಿಸಬೇಕು. ಜಿಲ್ಲಾದ್ಯಂತ ನಕಲಿ ವೈದ್ಯರ ಹಾವಳಿ ತಡೆಗಟ್ಟಬೇಕು. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತು ಮೀಟರ್‌ ಬಡ್ಡಿ ದಂಧೆಕೋರರನ್ನು ಮಟ್ಟ ಹಾಕಬೇಕು. ಇಲ್ಲದೇ ಹೋದರೆ ಅ.16ರಂದು ಎಸ್‌ಪಿ ಕಚೇರಿ ಎದುರು ನೊಂದ ಮಹಿಳೆಯರೊಂದಿಗೆ ಮತ್ತು ವಿವಿಧ ಸಂಘಟನೆಯ ಮುಖಂಡರೊಂದಿಗೆ ಸೇರಿ ಹಾವೇರಿ ಜಿಲ್ಲಾ ರೈತ ಸಂಘಗಳ ಒಕ್ಕೂಟ ಸಾಮೂಹಿಕ ನಾಯಕತ್ವದಡಿಯಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುತ್ತದೆ ಎಂದರು.ಅಖಿಲ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಶಾಂತಿಯುತ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. ಅಕ್ರಮ ಚಟುವಟಿಕೆ ತಡೆಗಟ್ಟಬೇಕಾದ ಅಧಿಕಾರಿಗಳು ಎಲ್ಲಾ ಗೊತ್ತಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ. ಎಸ್‌ಪಿಯವರು ಈ ವಿಷಯ ಗಂಭೀರವಾಗಿ ತೆಗೆದುಕೊಂಡು ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕೆಂದು ಒತ್ತಾಯಿಸಿದರು.ಇನ್ನೋರ್ವ ರೈತ ಮುಖಂಡ ಪ್ರಕಾಶ ಬಾರ್ಕಿ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜಿಲ್ಲಾಧಿಕಾರಿಗಳು ಹಾಗೂ ಎಸ್‌ಪಿಯವರು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಜನಪ್ರತಿನಿಧಿಗಳ ಪ್ರಭಾವಕ್ಕೆ ಒಳಗಾಗಬಾರದು. ಸಂವಿಧಾನಾತ್ಮಕ ಅಧಿಕಾರ ನಿರ್ವಹಿಸಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ಬಳಿಕ ಈ ಕುರಿತ ಮನವಿಪತ್ರವನ್ನು ಎಸ್ಪಿ ಯಶೋಧಾ ವಂಟಗೋಡಿ ಅವರಿಗೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಜಶೇಖರ ದೂದಿಹಳ್ಳಿ, ಮಹೇಶ ಕೊಟ್ಟೂರ, ಬಸವರಾಜ ಮೇಲಗಿರಿ, ಹನುಮಂತಪ್ಪ ಕೋಣನಕೊಪ್ಪ, ಭುವನೇಶ್ವರಿ ಬಡೆಮ್ಮನವರ, ಲಲಿತಾ ಲಮಾಣಿ, ಶೈಲಮ್ಮ ಹರನಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.