ಸಾರಾಂಶ
ಶಿರಸಿ: ನಗರ ಹಾಗೂ ಗ್ರಾಮೀಣ ಭಾಗದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಆದೇಶ ನೀಡುವಂತೆ ಇಲ್ಲಿನ ಸಾಂತ್ವನ ಮಹಿಳಾ ವೇದಿಕೆಯ ಪದಾಧಿಕಾರಿಗಳು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಹಾಗೂ ಪೊಲೀಸ್ ಉಪ ಅಧೀಕ್ಷಕ ಕೆ.ಎಲ್. ಗಣೇಶ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿರುವ ಕಾಂಪ್ಲೆಕ್ಸ್‌ವೊಂದರಲ್ಲಿ ಮಾದಕದ್ರವ್ಯ ಸೇರಿದಂತೆ ಕೆಲ ಅಕ್ರಮ ಚಟುವಟಿಕೆ ಕೇಂದ್ರವಾಗುತ್ತಿದೆ. ಹೀಗಾಗಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಅಸಹಾಯಕ ಮಹಿಳೆಯರಿಗೆ ಸುರಕ್ಷಿತ ತಾಣವಾಗಿ ರಕ್ಷಣೆಯನ್ನು ಕೊಡುತ್ತಿದ್ದ ಸ್ವಧಾರ ಕೇಂದ್ರವು ಸಹ ಸ್ಥಗಿತಗೊಂಡಿದೆ. ಈ ಅಸ್ವಾಭಾವಿಕ ಚಟುವಟಿಕೆಗಳು ಬೆಳೆಯುತ್ತಿರುವ ಹಿನ್ನೆಲೆ ಶಿರಸಿಗೆ ಮತ್ತೆ ಸ್ವಧಾರ ಕೇಂದ್ರದ ಅಗತ್ಯವಿದೆ.ವಿದ್ಯಾರ್ಥಿಗಳು ಮತ್ತು ಯಾರೇ ಇರಲಿ ಮಾದಕ ವಸ್ತುಗಳ ಸೇವನೆ ಮತ್ತು ಪೂರೈಕೆಯ ಮೇಲೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಪ್ರಮುಖ ಭಾಗಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪೊಲೀಸ್ ಗಸ್ತು ಮತ್ತು ಬಂದೋಬಸ್ತ್ ಹೆಚ್ಚಿಸಬೇಕು ಎಂದು ಆಗ್ರಹಿಸಲಾಯಿತು.ಮನವಿ ಸಲ್ಲಿಸುವ ವೇಳೆ ಸಾಂತ್ವನ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಬಿ.ಕೆ. ವೀಣಾಜಿ, ಅಧ್ಯಕ್ಷೆ ಜ್ಯೋತಿ ಭಟ್, ಕಾರ್ಯದರ್ಶಿ ಶೈಲಜಾ ಗೊರ್ನಮನೆ, ಖಜಾಂಚಿ ಮಧುಮತಿ ಹೆಗಡೆ, ಕಾನೂನು ಸಲಹಾಗಾರ್ತಿ ಫ್ಲಾವಿಯಾ ಜಗದೀಶ, ಮಹಿಳಾ ಸಾಂತ್ವನ ಸಹಾಯವಾಣಿಯ ಸಿಬ್ಬಂದಿಗಳಾದ ಸ್ಮಿತಾ ಮತ್ತು ಪಲ್ಲವಿ ಇದ್ದರು.