ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ವೇದಿಕೆಗಳಲ್ಲಿ ಅವಾಚ್ಯ ಶಬ್ದಗಳ, ಅಶ್ಲೀಲ ಪದಗಳನ್ನು ಬಳಸಿಕೊಂಡು ಹಲವರು ಹಾಡುತ್ತಿದ್ದಾರೆ

ಕೊಪ್ಪಳ: ಉತ್ತರ ಕರ್ನಾಟಕ ಭಾಗದಲ್ಲಿ ಅಶ್ಲೀಲ ಹಾಗೂ ಅವಾಚ್ಯ ಪದಗಳಿರುವ ಹಾಡುಗಳನ್ನು ಮನರಂಜನಾ ಕಾರ್ಯಕ್ರಮದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಹೆಚ್ಚಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಲ್ಲಾ ವಾದ್ಯಗೋಷ್ಠಿ ಕಲಾವಿದರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ವೇದಿಕೆಗಳಲ್ಲಿ ಅವಾಚ್ಯ ಶಬ್ದಗಳ, ಅಶ್ಲೀಲ ಪದಗಳನ್ನು ಬಳಸಿಕೊಂಡು ಹಲವರು ಹಾಡುತ್ತಿದ್ದಾರೆ. ಇದರ ಜೊತೆಗೆ ಅಶ್ಲೀಲ ನೃತ್ಯಗಳು ಹೆಚ್ಚಾಗುತ್ತಿದ್ದು ಇಂತಹವುಗಳನ್ನು ನಮ್ಮ ಉತ್ತರ ಕರ್ನಾಟಕದ ಕೆಲ ಯುವಕರು, ಕೆಲ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದುಬಿಡುತ್ತಿದ್ದಾರೆ. ಇವುಗಳಿಂದ ಯುವಕರ ಮೇಲೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಇದರಿಂದ ಕೆಲ ಕಲಾವಿದರು ಹಾಳಾಗಿ ಈಗಾಗಲೇ ಜೈಲು ಪಾಲಾಗಿದ್ದಾರೆ. ನಮ್ಮ ಉತ್ತರ ಕರ್ನಾಟಕದಲ್ಲಿ ಇಂತಹ ಅಶ್ಲೀಲ ಅವಾಚ್ಯ ಪದಗಳನ್ನು ತಡೆಯಲು ಪೊಲೀಸ್‌ ಇಲಾಖೆಯ ಸಹಕಾರ ಅತ್ಯಂತ ಅಗತ್ಯವಾಗಿದೆ. ಹೀಗಾಗಿ, ಪ್ರತಿಯೊಂದು ಪೊಲೀಸ್ ಠಾಣೆಯ ಮೂಲಕ ಪರವಾನಗಿ ನೀಡುವ ಸಂದಂರ್ಭದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿ ಪರವಾನಗಿ ಕೊಡುವುದು ಸೂಕ್ತವಾಗಿದೆ. ಇದರಿಂದ ಇಂತಹ ವಿಷಯಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಕೊಪ್ಪಳ ಜಿಲ್ಲಾ ವಾದ್ಯಗೋಷ್ಠಿ ಕಲಾವಿದರಾದ ಭಾಷಾ ಹಿರೇಮನಿ ಕಿನ್ನಾಳ, ಕನಕರಾಯ ಗಂಗಾವತಿ, ಪರಶುರಾಮ್ ಹುಲಿಗಿ, ಅಲ್ಲಾಭಕ್ಷಿ, ಶಿವಪ್ರಸಾದ್ ಮಠಪತಿ, ಅಕ್ಬರ ಅಲಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.