ಕನ್ನಡಪ್ರಭ ವಾರ್ತೆ ಪಾವಗಡ

ರೈತರ ಹೆಸರಿನಲ್ಲಿ ನಡೆಯುವ ಅಕ್ರಮ ಮಣ್ಣು ಸಾಕಾಣಿಕೆ ದಂಧೆಗೆ ಈ ಕೂಡಲೇ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಅವರಿಗೆ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾಲೂಕಿನ ಗುಂಡ್ಲಹಳ್ಳಿ ಹಾಗೂ ಬ್ಯಾಡನೂರು ತಲಾ 20ಎಕರೆ ಪ್ರದೇಶದ ಕೆರಗಳಲ್ಲಿ ಜೆಸಿಬಿಗಳಿಂದ 10ರಿಂದ 12ಅಡಿಗಳವರೆವಿಗೆ ಗುಂಡಿ ಅಗೆದು ಟ್ರಾಕ್ಟರ್‌ ಮತ್ತು ಟಿಪ್ಪರ್‌ಗಳಲ್ಲಿ ಮೂಲಕ ಎಗ್ಗಿಲ್ಲದೇ ಅಕ್ರಮ ಮಣ್ಣು ಸಾಕಾಣಿಕೆ ಮಾರಾಟ ದಂಧೆ ನಡೆಯುತ್ತಿದ್ದು, ಇದರಿಂದ ಅಂತರ್‌ ಜಲ ಕುಸಿತವಾಗಿ ನೀರಾವರಿ ಬೆಳೆಗಳ ಸಂರಕ್ಷಣೆಗೆ ತೊಂದರೆ ಅಗಲಿದೆ.ಈ ಕೂಡಲೇ ದಂಧೆ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿರುವುದಾಗಿ ಹೇಳಿದರು.ಕಳೆದ ವಾರದ ಹಿಂದೆ, ಕೆರೆಗಳಲ್ಲಿ ಅಕ್ರಮ ವ್ಯಾಪಕ ಮಣ್ಣು ಮಾರಾಟದ ದಂಧೆ ಕುರಿತು ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಗಮನಕ್ಕೆ ತಂದಿದ್ದ ಹಿನ್ನಲೆಯಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ನಿಯಂತ್ರಿಸುವಂತೆ ತಾಕೀತು ಮಾಡಿದ್ದರು. ಪರಿಣಾಮ ಆಗ ಅಕ್ರಮ ಮಣ್ಣು ಮಾರಾಟ ದಂಧೆ ಸ್ಥಗಿತವಾಗಿತ್ತು. ಮತ್ತೆ ಹಳೇ ಚಾಳಿಗೆ ಕೆಲವರು ಮುಂದಾಗಿದ್ದಾರೆ.ಈ ದಂಧೆಕೋರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನಲ್ಲಿ ದೊಡ್ಡ ಹಾಗೂ ಸಣ್ಣ ಕೆರೆಗಳು ಸೇರಿ 63 ಕೆರೆಗಳು ಇದ್ದು ಕೆರೆಗಳಲ್ಲಿ ಕನಿಷ್ಟ 3 ಅಡಿಗಳು ಹೂಳು ತೆಗೆಯಬೇಕು. ಕೆರೆಗಳಲ್ಲಿ ಇರುವ ಗಿಡ, ಮರಗಳು ಮತ್ತು ಕುರುಚಲು ಗಿಡಗಳು ತೆರವುಗೊಳಿಸಿ ಕೆರೆ ನೀರು ಸದಾ ಸ್ವಚ್ಛತೆಯಿಂದ ಕೂಡಿರುವಂತೆ ಕಾಪಾಡಬೇಕು. ಇದರಿಂದ ಪಶು ಪಕ್ಷಿಗಳು, ಕಾಡು, ಪ್ರಾಣಿಗಳಿಗೆ ಕುಡಿಯುವ ನೀರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ತಾಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ಯೋಜನೆ ಅಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಅಗಬೇಕು. ಪ್ರತಿ ಮನೆಗೆ 1/2 ಇಂಚು ನಲ್ಲಿಗೆ ನೀರು ಹಾಯಿಸಲು ಸಣ್ಣ ಪ್ರಮಾಣದ ಕೊಳಾಯಿಗಳನ್ನು ಅಳವಡಿಸಿರುವುದರಿಂದ ತೀವ್ರ ಸಮಸ್ಯೆ ಎದುರಾಗಿದೆ. ಇದರಿಂದ ಮನೆಗಳಿಗೆ ನೀರು ಸರಿಯಾಗಿ ಸರಬರಾಜು ಅಗುತ್ತಿಲ್ಲ ಎಂದು ಆರೋಪಿಸಿದರು.


ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು ಮಾತನಾಡಿ, ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಬಗರ್ ಹುಕ್ಕುಂ ಫಾರಂ ನಂ.50, 53 ಮತ್ತು 57 ರಲ್ಲಿ ಸುಮಾರು 50 ವರ್ಷಗಳಿಂದ ಹಾಕಿರುವ ಅರ್ಜಿಗಳಲ್ಲಿ ಕೆಲವು ಮಾತ್ರ ಜಮೀನಿನ ಸಾಗುವಳಿ ಮುಂಜೂರು ಪತ್ರ ನೀಡಿದ್ದು ಅನೇಕ ವರ್ಷದಿಂದ ಸ್ವಾಧೀನ ಅನುಭವದಲ್ಲಿದ್ದ ಬಡ ರೈತರಿಗೆ ಜಮೀನು ಮಂಜೂರು ಮಾಡದೇ ಸತಾಯಿಸುತ್ತಿದ್ದಾರೆ. ತಾಲೂಕಿನ ಗೊಲ್ಲನಕುಂಟೆ,ಕೊತ್ತೂರು ಗ್ರಾಮದ ಸರ್ವೆ ನಂ. 80 ರಲ್ಲಿ ಹಲವು ಬಡ ರೈತರಿಗೆ 1983 ರಲ್ಲಿ ಸಾಗುವಳಿ ಮಂಜೂರಾತಿ ಆದೇಶ ನೀಡಿದ್ದು, ಪಹಣಿ ಸಹ ಬಂದಿದೆ. ಇದರ ಮೇಲೆ ಬ್ಯಾಂಕಿನಲ್ಲಿ ಸಾಲ ಸಹ ಪಡೆದಿದ್ದಾರೆ. 60 ವರ್ಷದಿಂದ ಸ್ವಾಧೀನ ಅನುಭವದಲ್ಲಿದ್ದು ಮಂಜೂರಾತಿಯ ಅಗತ್ಯ ದಾಖಲೆ ಸಲ್ಲಿಸಿದ್ದರೂ ಸಹ ಜಮೀನಿನ ಖಾತೆ ಮಾಡಿಕೊಡಲು ಇಲ್ಲಿನ ಗ್ರಾಮಲೆಕ್ಕಾಧಿಕಾರಿ ಹಾಗೂ ಆರ್‌ಐಗಳು ಸತಾಯಿಸುತ್ತಿರುವುದಾಗಿ ಡಿಸಿ ಗಮನಕ್ಕೆ ತಂದರು.

ಇದೇ ವೇಳೆ ಸದಾಶಿವಪ್ಪ,ಪೂಜಾರಿ ಚಿತ್ತಯ್ಯ,ನಲಿಗಾನಹಳ್ಳಿ ಮಂಜು ಹಾಗೂ ಇತರೆ ಅನೇಕ ರೈತ ಸಂಘದ ಮುಖಂಡರಿದ್ದರು.