ಕೊಪ್ಪಳ: ಮಳೆ ಕೊರತೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಗೌರಿಶಂಕರ ದೇವಸ್ಥಾನದಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಪ್ರತಿಭಟನೆಯೂದ್ದಕ್ಕೂ ಎತ್ತಿನ ಬಂಡಿ, ಖಾಲಿಕೊಡಗಳೊಂದಿಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಖಾಲಿ ಕೊಡ ಹಾಗೂ ಒಣಗಿದ ಬೆಳೆ ಪ್ರದರ್ಶಿಸುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಭೀಕರ ಬರಗಾಲ ಈ ನಾಡನ್ನು ಆವರಿಸಿದೆ. ಲಭ್ಯವಿರುವ ಕೃಷಿ ಜಮೀನಿನಲ್ಲಿ ಕೇವಲ 30% ಬಿತ್ತನೆಯಾಗಿದೆ. ವಾಡಿಕೆಗಿಂತ 47% ಕಡಿಮೆ ಮಳೆಯಾಗಿದೆ. ರೈತರು ಗುಳೆ ಹೋಗುತ್ತಿದ್ದಾರೆ. ಕೆಲವರು ಆತ್ಮಹತ್ಯೆ ರೀತಿಯ ಅತಿರೇಕದ ಕ್ರಮಗಳಿಗೆ ಮುಂದಾಗಬಹುದು. ದುರಂತ ಸಂಭವಿಸುವ ಮೊದಲೇ ಕೊಪ್ಪಳವನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕಾಮಗಾರಿ ತಕ್ಷಣವೇ ಆರಂಭಿಸಬೇಕು ಎಂದರು.ತಾಂತ್ರಿಕವಾಗಿ ಬರಪೀಡಿತ ಎಂದು ಘೋಷಣೆಯಾದರೆ ಮಾತ್ರ ಹಣ ಬಿಡುಗಡೆ ಮಾಡಲು ಸಾಧ್ಯ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹175 ಕೋಟಿ ಹಣ ಇದೆ ಎಂದು ಸರ್ಕಾರವೇ ಹೇಳಿದೆ. ಹಾಗಿದ್ದರೆ ಘೋಷಣೆ ಮಾಡಲು ವಿಳಂಬ ಏಕೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ರೈತರ ಅಳಲನ್ನು ಇಲ್ಲಿಯವರೆಗೆ ಏಕೆ ಕೇಳಿಲ್ಲ? ಶಾಸಕರು ಬರ ವೀಕ್ಷಣೆ ಏಕೆ ಮಾಡಿಲ್ಲ? ಕೊಪ್ಪಳ ಬರ ಪೀಡಿತ ಎಂದು ಘೋಷಣೆ ಮಾಡಿಸಲು ಸಾಧ್ಯವಾಗದೇ ಇದ್ದರೆ ಅಧಿಕಾರದಲ್ಲಿ ಏಕೆ ಇರಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಎಕರೆಗೆ ಕನಿಷ್ಠ ₹30,000 ಪರಿಹಾರ ಮಂಜೂರು ಮಾಡಬೇಕು. ಅಕಾಲಿಕವಾಗಿ ಸಾಯುವ ಜಾನುವಾರುಗಳ ರೈತರಿಗೆ ಕಾಮಧೇನು ಮತ್ತು ಅನುಗ್ರಹ ಯೋಜನೆಯಡಿ ಸರ್ಕಾರ ₹62 ಕೋಟಿ ಬಾಕಿ ಇಟ್ಟುಕೊಂಡಿದೆ. ಸುಮಾರು 58,000 ರೈತರು ಆ ಹಣಕ್ಕಾಗಿ ಕಾಯುತ್ತಿದ್ದಾರೆ. ಅವರಲ್ಲಿ ಕೊಪ್ಪಳದ ರೈತರೂ ಇದ್ದಾರೆ.ಈ ಕೂಡಲೇ ಪರಿಹಾರದ ಮೊತ್ತ ಅವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಈಶಪ್ಪ ಮಾದಿನೂರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಪೂರೈಸಿಲ್ಲ. ರೈತರ ಹಿತ ಕಡೆಗಣಿಸಿದೆ. ಬರದ ಹಿನ್ನೆಲೆ ಪರ್ಯಾಯ ಬೆಳೆ ಬೆಳೆಯಲು ಉಚಿತ ಗೊಬ್ಬರ ಮತ್ತು ಬೀಜ ಪೂರೈಸಬೇಕು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ರೈತರ ಕೃಷಿ ಸಾಲ ಮನ್ನಾ ಮಾಡಿದ್ದರು. ಅದರಂತೆ ಅತೀವ ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯೆಪ್ಪ ಗಿಣಿಗೇರಿ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 3.49 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸಾವಯವ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಕೇವಲ 1.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬಹುತೇಕ ಭಾಗಗಳಲ್ಲಿ ಬೆಳೆಗಳು ಕುಂಠಿತಗೊಂಡಿದೆ. ಹಲವೆಡೆ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಆದರೂ ಜಿಲ್ಲಾಡಳಿತ ನಿರ್ಲಕ್ಷಿಸುವುದು ಅಕ್ಷಮ್ಯ ಎಂದು ಆರೋಪಿಸಿದರು.
ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಮಾತನಾಡಿ, ಹೋಬಳಿಗೆ ಒಂದರಂತೆ ಗೋ ಶಾಲೆ ಹಾಗೂ ತಾಲೂಕಿಗೆ ಎರಡು ಮೇವು ಬ್ಯಾಂಕ್ ಸ್ಥಾಪಿಸಬೇಕು. ಅಧಿಕಾರಿಗಳು ತಕ್ಷಣವೇ ಬರ ಸಮೀಕ್ಷೆ ಕೈಗೊಳ್ಳಬೇಕು. ಗುಳೆ ಹೋಗಬಹುದಾದ ರೈತರಿಗೆ ವಿಶೇಷ ಕಾರ್ಯಕ್ರಮ ಆರಂಭಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬರಗಾಲ ಆವರಿಸಬಹುದು ಎಂಬ ಮುನ್ಸೂಚನೆ ಮೇ ತಿಂಗಳಿನಲ್ಲಿಯೇ ಇತ್ತು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಶಾಸಕರು ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಜನರ ಸಮಸ್ಯೆಗಳ ಕುರಿತು ಮಾತನಾಡುವುದನ್ನು ಮರೆತು ಅಧಿಕಾರಕ್ಕಾಗಿ ಹೋರಾಟ ನಡೆಸಿರುವ ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ದೇವೇಂದ್ರಪ್ಪ ಪೂಜಾರ್ ಬೈರಾಪುರ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ರಮೇಶ್ ಡಂಬ್ರಳ್ಳಿ ಮತ್ತು ಕ್ರೀಡಾ ವಿಭಾಗದ ಘಟಕದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ, ತಾಲೂಕಾಧ್ಯಕ್ಷ ವಿರೇಶಗೌಡ್ರ ದಳಪತಿ, ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ಸುರೇಶ ದದಗಲ್, ತಾಲೂಕು ಎಸ್ಟಿ ಘಟಕದ ಅಧ್ಯಕ್ಷ ಮಲ್ಲಪ್ಪ ಹಂದ್ರಾಳ್, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್,ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕ ಉಪಾಧ್ಯಕ್ಷ ಗಂಗಾಧರ ವಸ್ತ್ರದ, ನಗರ ಘಟಕ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ಉಪಾಧ್ಯಕ್ಷೆ ಶರಣಮ್ಮ, ನಗರ ಘಟಕ ಮಹಿಳಾ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ ಇತರರಿದ್ದರು.