ಶಿರಹಟ್ಟಿ ಪಟ್ಟಣ ಹಾಗೂ ತಾಲೂಕಿನ ಛಬ್ಬಿ, ಬೆಳ್ಳಟ್ಟಿ ಗ್ರಾಮಗಳಲ್ಲಿ ಶನಿವಾರ ಜಿಲ್ಲಾಧಿಕಾರಿ ಸಿ.ಎನ್. ಶೀಧರ್ ಅವರು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಪರಿಶೀಲನೆ ನಡೆಸಿದರು.

ಶಿರಹಟ್ಟಿ: ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶಿರಹಟ್ಟಿ ತಾಲೂಕನ್ನು ತಕ್ಷಣವೇ ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ರೈತ ಮುಖಂಡ ತಿಮ್ಮರಡ್ಡಿ ಮರಡ್ಡಿ ಜಿಲ್ಲಾಧಿಕಾರಿ ಸಿ.ಎನ್. ಶೀಧರ್ ಅವರಲ್ಲಿ ಮನವಿ ಮಾಡಿಕೊಂಡರು.

ಶನಿವಾರ ಶಿರಹಟ್ಟಿ ಪಟ್ಟಣ ಹಾಗೂ ತಾಲೂಕಿನ ಛಬ್ಬಿ, ಬೆಳ್ಳಟ್ಟಿ ಗ್ರಾಮಗಳಲ್ಲಿ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಪರಿಶೀಲನೆ ನಡೆಸಿದ ವೇಳೆ ರೈತರು ಮನವಿ ಮಾಡಿಕೊಂಡರು. ಈ ವೇಳೆ ಮುಖಂಡ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹೆಸರು, ಜೋಳ, ಮೆಕ್ಕೆಜೋಳ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಈಗಾಗಲೇ ಬಿತ್ತನೆಗೆ ಮಾಡಿದ ಸಾವಿರಾರು ರುಪಾಯಿ ವೆಚ್ಚ ವ್ಯರ್ಥವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ರೈತರಿಗೆ ಪರಿಹಾರಧನ, ಬೆಳೆ ವಿಮೆ, ಬಡ್ಡಿರಹಿತ ಸಾಲ ಮರುಪಾವತಿಗೆ ಅವಧಿ ವಿಸ್ತರಣೆ, ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಂಡು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ತಕ್ಷಣ ಬೆಳೆ ಹಾನಿಯ ವಾಸ್ತವ ಸ್ಥಿತಿ ಪರಿಶೀಲಿಸಿ, ರೈತರಿಂದ ದಾಖಲಿಸಲಾದ ಮಾಹಿತಿ ಪರಿಗಣಿಸಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜತೆಗೆ ಬೆಳೆ ಪರಿಹಾರ, ಬೆಳೆ ವಿಮೆ, ಇನ್‌ಪುಟ್ ಸಬ್ಸಿಡಿ ಹಾಗೂ ಇತರ ಸೌಲಭ್ಯಗಳನ್ನು ಶೀಘ್ರವೇ ರೈತರಿಗೆ ಒದಗಿಸಬೇಕು ಎಂದು ಮನವಿ ಮಾಡಿದರು.

ಕಳೆದ ವರ್ಷದ ಬೆಳೆ ನಷ್ಟಕ್ಕೆ ಪರಿಹಾರವಾಗಿ ನೀಡಬೇಕಿದ್ದ ಬೆಳೆ ವಿಮೆ ಹಣ ಇನ್ನೂ ಅನೇಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿಲ್ಲ.ರೈತರು ವಿಮೆ ಹಣಕ್ಕಾಗಿ ಕಾಯುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಅಗತ್ಯವಾದ ಬಂಡವಾಳದ ಕೊರತೆಯಿಂದ ಹೊಸ ಬೆಳೆ ಬೆಳೆಯಲು ತೊಂದರೆ ಎದುರಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು, ಬಾಕಿ ಇರುವ ಬೆಳೆ ವಿಮೆ ಪರಿಹಾರವನ್ನು ಅರ್ಹ ರೈತರ ಖಾತೆಗಳಿಗೆ ಶೀಘ್ರವಾಗಿ ಜಮೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಅಧಿಕಾರಿ ನಮ್ಮ ಕೈಯಲ್ಲಿಲ್ಲ. ಆ. ೨೦ರ ವರೆಗೆ ಕಾಲವಕಾಶವಿದೆ. ಸರ್ಕಾರ ದತ್ತಾಂಶಗಳನ್ನು ಪಡೆದುಕೊಂಡು ಘೋಷಣೆ ಮಾಡಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳ ಬೆಳೆಹಾನಿ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ರೈತರು ತಪ್ಪದೇ ಬೆಳೆ ವಿಮೆ ಕಟ್ಟಬೇಕು. ಬೆಳೆ ಹಾನಿಯ ಮಾಹಿತಿಯನ್ನು ರೈತರೇ ಆ್ಯಪ್‌ನಲ್ಲಿ ನಿಖರವಾಗಿ ದಾಖಲಿಸಿದರೆ ಸಮೀಕ್ಷೆಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ಯಾವುದೇ ರೈತ ಸರ್ಕಾರದ ಪರಿಹಾರದಿಂದ ವಂಚಿತರಾಗಲು ಸಾಧ್ಯವೇ ಇಲ್ಲ ಎಂದರು.

ಬ್ಯಾಂಕ್‌ನಲ್ಲಿ ಬೆಳೆ ವಿಮೆ ತುಂಬಿಸಿಕೊಳ್ಳುತ್ತಿಲ್ಲ ಎನ್ನುವ ರೈತರ ಮಾತಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ನೀವು ಕಟಬಾಕಿದಾರರಿದ್ದರೆ ಅಥವಾ ಬ್ಯಾಂಕ್‌ನಲ್ಲಿ ಸಾಲ ಪಡೆದಿಲ್ಲ ಎನ್ನುವುದಾದರೆ ೨೦೨೬-೨೭ನೇ ಸಾಲಿನಲ್ಲಿ ಧೃಡೀಕರಣ ಪತ್ರ ಸಲ್ಲಿಸಿ, ಗ್ರಾಮ ಒನ್ ಸೆಂಟರ್‌ನಲ್ಲಿ ಬೆಳೆ ವಿಮೆ ಕಟ್ಟಿ ಎಂದು ತಿಳಿಸಿದರು. ಕಳೆದ ವರ್ಷದ ಬೆಳೆ ವಿಮೆ ಹಣ ಕೂಡ ಆಗಸ್ಟ್ ತಿಂಗಳಲ್ಲಿ ರೈತರ ಖಾತೆಗೆ ಜಮೆ ಆಗಲಿದೆ ಎಂದರು.

ಸಮೀಕ್ಷೆ ವೇಳೆ ಉಪ ವಿಭಾಗಾಧಿಕಾರಿ ಗಂಗಪ್ಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಜಿ.ಎಸ್. ಸ್ಫೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಚಿದಾನಂದಪ್ಪ, ತಹಸೀಲ್ದಾರ್‌ ಕೆ. ರಾಘವೇಂದ್ರ ರಾವ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಮುಖಂಡರಾದ ಶಿವನಗೌಡ ಪಾಟೀಲ, ಮೋಹನ್ ಗುತ್ತೆಮ್ಮನವರ, ಜಾನು ಲಮಾಣಿ, ಗೂರಪ್ಪ ಲಮಾಣಿ ಇದ್ದರು.