ಸಾರಾಂಶ
ಸಿರುಗುಪ್ಪ: ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಒತ್ತಾಯಿಸಿ ಮುಖ್ಯಮಂತ್ರಿಗೆ ತಹಸೀಲ್ದಾರ್ ಗೌಸಿಯ ಬೇಗಂ ಅವರ ಮೂಲಕ ಮನವಿ ಸೋಮವಾರ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್.ಮಾಧವ ರೆಡ್ಡಿ ಮಾತನಾಡಿ, ಪ್ರಸ್ತುತವಾಗಿ ರಾಜ್ಯದಲ್ಲಿ ಈರಳ್ಳಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಪ್ರತಿವರ್ಷ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹2500ರಿಂದ ₹3000 ಬೆಲೆಯಲ್ಲಿ ಮಾರಾಟವಾಗುತ್ತಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರದಿಂದ ರಫ್ತು ಮಾಡದೇ ಇರುವುದರಿಂದ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಕರ್ನಾಟಕ ರಾಜ್ಯಕ್ಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಸರಿಸುಮಾರು 30 ಸಾವಿರ ಎಕರೆಯಲ್ಲಿ ಈರುಳ್ಳಿ ಬೆಳೆದ ರೈತರು ಬೆಲೆ ಕುಸಿತವನ್ನು ಅನುಭವಿಸುತ್ತಿದ್ದು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಪ್ರಸಕ್ತ ಮುಂಗಾರು ಸಾಲಿನಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್‌ಗೆ ₹500ರಿಂದ ₹600 ಆಗಿರುವುದರಿಂದ ರೈತರು ಪ್ರತಿ ಎಕರೆಗೆ ₹1 ಲಕ್ಷ ಖರ್ಚು ಮಾಡಿದ್ದು, ಹಾಕಿದ ಬಂಡವಾಳವೂ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡಿದ್ದಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರು ಬರುವಂತಹ ಪರಿಸ್ಥಿತಿ ಬಂದೊದಗಿದೆ. ಸೂಕ್ತ ಬೆಲೆ ಇಲ್ಲದೇ ಖರೀದಿದಾರರು ಕಡಿಮೆ ಬೆಲೆಯನ್ನು ನಿರ್ಧಾರ ಮಾಡಿರುವುದರಿಂದ ರೈತರು ಆತಂಕದಲ್ಲಿ ಇದ್ದಾರೆ. ಈರುಳ್ಳಿಯನ್ನು ಶೇಖರಿಸಿ ಇಟ್ಟುಕೊಳ್ಳಲಾಗದೇ ಅತೀ ಕಡಿಮೆ ಬೆಲೆಗೆ ಮಾರಟ ಮಾಡಲು ಆಗದೇ ಗೊಂದಲದಲ್ಲಿದ್ದಾರೆ. ಈರುಳ್ಳಿ ಬೆಳೆಯು ದಿನೇ ದಿನೇ ಕೊಳೆಯುವ ಹಂತಕ್ಕೆ ಬಂದಿದೆ.
ಕರ್ನಾಟಕ ಸರ್ಕಾರವು ತಕ್ಷಣವೇ ಮಧ್ಯ ಪ್ರವೇಶ ಮಾಡಿ ಈರುಳ್ಳಿ ಬೆಳೆಯನ್ನು, ಬೆಳೆದ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಪ್ರತಿ ಕ್ವಿಂಟಲ್ ಗೆ ₹3000 ಬೆಂಬಲ ಬೆಲೆಯಡಿ ಸರ್ಕಾರ ಖರೀದಿಸಲು ಸಂಭಂದಪಟ್ಟ ಇಲಾಖಾ ಸಚಿವರಿಗೆ, ಜಿಲ್ಲಾಡಳಿತಗಳಿಗೆ ಸೂಕ್ತ ಮಾರುಕಟ್ಟೆ ದರ ನಿಗದಿಪಡಿಸಿ ಈರುಳ್ಳಿ ಖರೀದಿಗೆ ಮುಂದಾಗಬೇಕೆಂದು ಆಗ್ರಹಿಸುತ್ತಿದ್ದೇವೆ.ಮುಖಂಡರಾದ ದೊಡ್ಡ ಮುದುಕಣ್ಣ, ಬಸವರಾಜ್, ಅಂಜಿನಯ್ಯ ಭಾಗವಹಿಸಿದ್ದರು.