ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪ್ರಭಾವದಿಂದ ಸ್ಲಂರಹಿತ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಲು ಸೂಚಿಸಿದ್ದರಿಂದ ನಗರದ ಅರ್ಹ ಸ್ಲಂ ನಿವಾಸಿಗಳಿಗೆ, ವಸತಿರಹಿತರಿಗೆ ಜನಪ್ರತಿನಿಧಿಗಳಿಂದ ಅನ್ಯಾಯ ಮಾಡಲಾಗುತ್ತಿದೆ.

ಗದಗ: ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆ ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿಯಿಂದ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ಈ ಹಿಂದೆ ಗದಗ- ಬೆಟಗೇರಿ ನಗರದ ಸ್ಲಂ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 863 ಮನೆಗಳು ಮಂಜೂರು ಮಾಡಲಾಗಿದೆ. ಆದರೆ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಎಡವಟ್ಟಿನಿಂದ ಅರ್ಹ ಗುಡಿಸಲು ನಿವಾಸಿಗಳು ಸರ್ಕಾರದ ವಸತಿ ಯೋಜನೆಯಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಜಾರಿಗೆ ತರಲಾಗುತ್ತಿರುವ 2.0 ವಸತಿ ಯೋಜನೆಗೆ ನಗರದ ಗುಡಿಸಲು ನಿವಾಸಿಗಳ ಅರ್ಹ ಫಲಾನುವಿಗಳನ್ನು ಗುರುತಿಸಿ ವಸತಿ ಯೋಜನೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪ್ರಭಾವದಿಂದ ಸ್ಲಂರಹಿತ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಲು ಸೂಚಿಸಿದ್ದರಿಂದ ನಗರದ ಅರ್ಹ ಸ್ಲಂ ನಿವಾಸಿಗಳಿಗೆ, ವಸತಿರಹಿತರಿಗೆ ಜನಪ್ರತಿನಿಧಿಗಳಿಂದ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಿ ಸ್ಲಂ ಪ್ರದೇಶಗಳಲ್ಲಿ ಮಾತ್ರ ಸರ್ಕಾರದ ವಸತಿ ಯೋಜನೆಯ ಮನೆಗಳನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ನಗರದ ಸ್ಲಂ ಪ್ರದೇಶಗಳ ಜಲ್ವಂತ ಸಮಸ್ಯೆಗಳಾದ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡಬೇಕು. ಸ್ಲಂ ಭವನ ನಿರ್ಮಾಣಕ್ಕಾಗಿ ಅನುದಾನ ಮಂಜೂರುಗೊಳಿಸಬೇಕು. ಕೊಳಗೇರಿಗಳ ಅಭಿವೃದ್ಧಿ ಅನುದಾನ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆಗೆ ತಕ್ಷಣ ಕ್ರಮ ಕೈಗೊಳ್ಳಲು, ನಗರದ ಸ್ಲಂ ಜನಸಂಖ್ಯೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸಲು ಭೂಮಿಯನ್ನು ಖರೀದಿಸಲು, ಸ್ಲಂ ಜನರ ಸಮಸ್ಯಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಕ್ಷಣ ಕುಂದುಕೊರತೆಗಳ ಸಭೆ ಆಯೋಜಿಸಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಸ್ಲಂ ಬೋರ್ಡ್ ಅಧಿಕಾರಿಗಳು ಸ್ಲಂ ಜನರ ಸಮಸ್ಯೆಗಳಿಗೆ ಹಂತ- ಹಂತವಾಗಿ ಕೆಲಸ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಪತ್ರವನ್ನು ಕಳುಹಿಸಿ ನೇರವಾಗಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಭೆಯ ದಿನಾಂಕವನ್ನು ನಿಗದಿಗೊಳಿಸಲಾಗುವುದೆಂದು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಪುಷ್ಪಾ ಬಿಜಾಪೂರ, ರವಿ ಗೋಸಾವಿ, ಮೆಹಬೂಬಸಾಬ ಬಳ್ಳಾರಿ, ಜಂದಿಸಾಬ ಡಾಲಾಯತ, ಅಫ್ರೋಜಾ ನಾಗನೂರ, ಮುನ್ನಾ ಅಗಡಿ, ಮೌಲಾಸಾಬ ಮುಜಾವರ ಮುಂತಾದವರು ಇದ್ದರು.