ಸಾರಾಂಶ
ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ೪೯-ಸಮುದಾಯಗಳ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಹೊಸಪೇಟೆ: ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು ಅಲೆಮಾರಿ ಸಮುದಾಯದವರ ಮೇಲೆ ನೀಡಿರುವ ಹೇಳಿಕೆ ಹಾಗೂ ದೂರನ್ನು ಹಿಂಪಡೆದು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ೪೯-ಸಮುದಾಯಗಳ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಅಲೆಮಾರಿಗಳ ರಾಜ್ಯ ಸಮ್ಮೇಳನಕ್ಕೆ ನಡೆದ ಪೂರ್ವಭಾವಿ ಸಭೆಯಲ್ಲಿ ೪೯ ಅಲೆಮಾರಿ ಸಮುದಾಯದ ಮುಖಂಡರು ಹಾಗೂ ರಾಜ್ಯಾಧ್ಯಕ್ಷರನ್ನು ಮಾತ್ರ ಆಹ್ವಾನಿಸಿತ್ತು. ಆಹ್ವಾನ ಇಲ್ಲದಿದ್ದರೂ ನಿಗಮದ ಅಧ್ಯಕ್ಷೆ ಪಲ್ಲವಿ ಸಭೆಯಲ್ಲಿ ಬಂದು ಗೊಂದಲ ಉಂಟು ಮಾಡಿ, ಅಲೆಮಾರಿ ಸಮುದಾಯದ ಮುಖಂಡರಿಗೂ ಬಾಯಿಗೆ ಬಂದಂತೆ ಮಾತನಾಡಿ, ಅವರ ಏಕಪಕ್ಷೀಯವಾಗಿ ಕೆಲಸ ಮಾಡುವವರ ವಿರುದ್ಧ ಧ್ವನಿ ಎತ್ತಿದ ೭-ಜನ ಸಮುದಾಯದ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಅವರು ಏಕ ಪಕ್ಷೀಯವಾಗಿ ಕೆಲಸ ಮಾಡಿರುವ ದಾಖಲೆಗಳು ನಮ್ಮ ಬಳಿ ಇವೆ ಹಾಗೂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ ಸಹ ಅಲೆಮಾರಿ ಮುಖಂಡರನ್ನು ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿದ್ದಾರೆ. ಅವರನ್ನು ಸಹ ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.ನಿಗಮದ ಅಧ್ಯಕ್ಷರನ್ನು ವಜಾಗೊಳಿಸಿ, ಸಭೆಗೆ ಅಡ್ಡಿಪಡಿಸಿದ್ದಕ್ಕಾಗಿ ಮಾಜಿ ಸಚಿವ ಆಂಜನೇಯ ಅವರಿಗೆ ಹಾಗೂ ೪೯ ಸಮುದಾಯದ ಮುಖಂಡರಿಗೂ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಸುಳ್ಳು ಆರೋಪದ ದೂರನ್ನು ಕೂಡಲೇ ಹಿಂಪಡೆಯಬೇಕು. ಕ್ಷಮೆಯಾಚಿಸದಿದ್ದಲ್ಲಿ ರಾಜಧಾನಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಸಣ್ಣ ಮಾರೆಪ್ಪ, ಕಿನ್ನೂರಿ ಶೇಖಪ್ಪ, ಮಂಜಪ್ಪ, ಸಿದ್ದು ಬೆಲಗಲ್, ಜೆ. ರಮೇಶ, ಹನುಮಕ್ಕ, ಶೇಖರ, ಹಂಪಯ್ಯ, ಚವಡಪ್ಪ ಎಸ್.ಕೆ., ದೊಡ್ಡ ಚಮಲಪ್ಪ, ಹನುಮಂತ, ಮಂಜಪ್ಪ, ಹಂಪಯ್ಯ, ಸಣ್ಣ ಅಜ್ಜಯ್ಯ, ಶಿವಕುಮಾರ್, ಮಲ್ಲೇಶಪ್ಪ ಸೇರಿ ಇತರರಿದ್ದರು.