ಕೆಲಸದ ಅವಧಿ ಹೆಚ್ಚಳ ಪ್ರಸ್ತಾವ ಕೈಬಿಡಲು ಆಗ್ರಹ

| Published : Jun 24 2025, 12:32 AM IST

ಕೆಲಸದ ಅವಧಿ ಹೆಚ್ಚಳ ಪ್ರಸ್ತಾವ ಕೈಬಿಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಅಂಗೀಕರಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧದಿಂದಾಗಿ ಜಾರಿ ಮಾಡಲಾಗುತ್ತಿಲ್ಲ. ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳ ಕೆಲವು ಪ್ರಸ್ತಾವಗಳನ್ನು ಹಿಂಬಾಗಿಲಿನಿಂದ ರಾಜ್ಯಗಳ ಮೇಲೆ ಒತ್ತಡ ಹೇರಿ ಜಾರಿಮಾಡಲು ಮುಂದಾಗಲಾಗುತ್ತಿದೆ. ಇದರ ಹಿಂದೆ ಲೂಟಿಕೋರ ಬಹುರಾಷ್ಚ್ರೀಯ ಕಂಪನಿಗಳಿಗೆ ಲಾಭ ಕಲ್ಪಿಸುವ ಹುನ್ನಾರ ಅಡಗಿದೆ.

ಹುಬ್ಬಳ್ಳಿ: ಕರ್ನಾಟಕದಲ್ಲಿ 10 ಗಂಟೆಗಳ ಕೆಲಸದ ಅವಧಿ ಹಾಗೂ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಗಳನ್ನು ರಾಜ್ಯ ಸರಕಾರ ಒಪ್ಪಿಕೊಳ್ಳಬಾರದು ಎಂದು ಸಿಐಟಿಯು ಮುಖಂಡ ಮಹೇಶ ಪತ್ತಾರ ಒತ್ತಾಯಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಧಾರವಾಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಅಮರಗೋಳದ ಶ್ರಮಿಕ ಭವನದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಅಂಗೀಕರಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧದಿಂದಾಗಿ ಜಾರಿ ಮಾಡಲಾಗುತ್ತಿಲ್ಲ. ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳ ಕೆಲವು ಪ್ರಸ್ತಾವಗಳನ್ನು ಹಿಂಬಾಗಿಲಿನಿಂದ ರಾಜ್ಯಗಳ ಮೇಲೆ ಒತ್ತಡ ಹೇರಿ ಜಾರಿಮಾಡಲು ಮುಂದಾಗಲಾಗುತ್ತಿದೆ. ಇದರ ಹಿಂದೆ ಲೂಟಿಕೋರ ಬಹುರಾಷ್ಚ್ರೀಯ ಕಂಪನಿಗಳಿಗೆ ಲಾಭ ಕಲ್ಪಿಸುವ ಹುನ್ನಾರ ಅಡಗಿದೆ ಎಂದು ಅವರು ಆರೋಪಿಸಿದರು.

ಎಐಯುಟಿಯುಸಿ ಮುಖಂಡ ಗಂಗಾಧರ ಬಡಿಗೇರ ಮಾತನಾಡಿ, ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ, ಮಾರಾಟ ನಿಲ್ಲಿಸಬೇಕು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿಮಾಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕೆಂಬ ಮುಂತಾದ ಬೇಡಿಕೆಗಳಿಗಾಗಿ ಒತ್ತಾಯಿಸಿ ಇದೇ ಜುಲೈ 9ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲು ಕರೆ ನೀಡಲಾಗಿದೆ ಎಂದರು.

ಸಂಯುಕ್ತ ಹೋರಾಟ ಕರ್ನಾಟದ ಸಂಚಾಲಕ ಶರಣು ಗೋನವಾರ ಮಾತನಾಡಿ, ಈ ಮುಷ್ಕರವನ್ನು ರೈತ ಸಂಘಟನೆಗಳು ಬೆಂಬಲಿಸಲಿವೆ ಎಂದರು.

ಈ ವೇಳೆ ಮುಷ್ಕರದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಮಿಕ ಮುಖಂಡ ಬಿ.ಎನ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ಎಐಐಇಎ ಮುಂತಾದ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

ಸಂಚಾಲಕ ಅಶೋಕ ಬಾರ್ಕಿ ಮುಖಂಡರಾದ ದೀಪಾ, ಎ.ಎಸ್. ಪೀರಜಾದೆ, ಬಸೀರ ಮುಧೋಳ, ರಮೇಶ ಬೋಸ್ಲೆ, ತಾಯಿದಾಸ್, ಆನಂದ ಅರ್ಚಕ, ಎ.ಎಂ. ಖಾನ್, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಮಂಜುನಾಥ ಹುಜರಾತಿ ಮುಂತಾದವರು ಉಪಸ್ಥಿತರಿದ್ದರು.