ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸದಂತೆ ಒತ್ತಾಯಿಸಿ ಕಡವಂತಿ ಗ್ರಾಮಸ್ಥರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗಳಿಗೆ ಗ್ರಾಪಂ ಪಿಡಿಒ ಮೂಲಕ ಮನವಿ ನೀಡಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸದಂತೆ ಒತ್ತಾಯಿಸಿ ಕಡವಂತಿ ಗ್ರಾಮಸ್ಥರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗಳಿಗೆ ಗ್ರಾಪಂ ಪಿಡಿಒ ಮೂಲಕ ಮನವಿ ನೀಡಿ ಒತ್ತಾಯಿಸಿದ್ದಾರೆ.

ಕಡವಂತಿ ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಪೂರ್ವಜರು 100ಕ್ಕೂ ಅಧಿಕ ವರ್ಷಗಳಿಂದ ನಿರಂತರವಾಗಿ ಕೃಷಿ, ಪಶುಪಾಲನೆ ಮತ್ತು ಸಾಂಪ್ರದಾಯಿಕ ಕಸುಬುಗಳೊಂದಿಗೆ ಜೀವನ ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಕಡವಂತಿ ಗ್ರಾಪಂ ವ್ಯಾಪ್ತಿಯನ್ನು ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ನೂರಾರು ವರ್ಷಗಳಿಂದ ಈ ಗ್ರಾಮ ಜನವಸತಿ ಇರುವ ಗ್ರಾಮವಾಗಿದ್ದು, ಭೂ ದಾಖಲೆಗಳು, ಹಳೆಯ ನಕ್ಷೆಗಳು, ಶಾಲೆ, ದೇವಸ್ಥಾನ, ಸ್ಮಶಾನ, ಭೂಮಿ ಮತ್ತು ಮನೆಗಳು ಇದಕ್ಕೆ ಸಾಕ್ಷಿಯಾಗಿವೆ. 2006ರ ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳ ಕಾಯ್ದೆ ಎಫ್.ಆರ್.ಎ. ಪ್ರಕಾರ ಇಲ್ಲಿ ಬದುಕಲು ಗ್ರಾಮಸ್ಥರಿಗೆ ಹಕ್ಕು ಇದೆ ಎಂದು ತಿಳಿಸಿದ್ದಾರೆ.

ಆದರೆ, ಪರಿಸರ ಸೂಕ್ಷ್ಮ ವಲಯ (ಇಎಸ್‌ಝೆಡ್‌) ನಿಯಮಗಳು ಜಾರಿ ಬಂದರೆ ಮನೆ ನಿರ್ಮಾಣ, ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿಗೆ ಅನುಮತಿ ದೊರೆಯುವುದಿಲ್ಲ. ನಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಇಲ್ಲಿನ ಗ್ರಾಮಸ್ಥರು ಪ್ರಮುಖವಾಗಿ ಅಡಕೆ, ಕಾಫಿ, ಕಾಳುಮೆಣಸು, ಭತ್ತ, ರಬ್ಬರ್ ಮುಂತಾದ ಕೃಷಿ ಮಾಡುತ್ತಿದ್ದಾರೆ. ಆದರೆ, ಇಎಸ್‌ಝಡ್‌ನಿಂದ ಹೊಸ ಕೃಷಿ ಚಟುವಟಿಕೆ, ಸಂಸ್ಕರಣಾ ಘಟಕ, ಡೈರಿ, ಫಾರ್ಮ್‌ಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ನಿರಾಶ್ರಿತರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಡವಂತಿ ಗ್ರಾಮವನ್ನು ಇಎಸ್‌ಝಡ್‌ನಿಂದ ಹೊರಗಿಡಬೇಕು. ಎಫ್‌ಆರ್‌ಎ 2006ರ ಅಡಿಯಲ್ಲಿ ಸಾಂಪ್ರದಾಯಿಕ ಅರಣ್ಯ ಹಕ್ಕುಗಳಿಗೆ ರಕ್ಷಣೆ ನೀಡಬೇಕು.1991ರ ಜನಗಣತಿ ಪ್ರಕಾರ ಇರುವ ಗ್ರಾಮ, ಪಟ್ಟಣ, ಜನವಸತಿ ಪ್ರದೇಶಗಳನ್ನು ಯೋಜನೆಯಿಂದ ಕೈಬಿಡಬೇಕು. ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕು. ಗ್ರಾಪಂ ಹಾಗೂ ಗ್ರಾಮ ಸಭೆಯ ಒಪ್ಪಿಗೆ ಇಲ್ಲದೇ ಯಾವುದೇ ಗಡಿ ಅಂತಿಮಗೊಳಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.