ಹೊಸಪೇಟೆ: ತಾಲೂಕಿನಲ್ಲಿ ಬರುವಂತಹ ಎಲ್ಲ ಕೆರೆಗಳಿಗೆ ನೀರು ತುಂಬಿಸುವಂತೆ ಮತ್ತು ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಹೊಸಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಪಿ.ಕೆ.ಹಳ್ಳಿ ಕೆರೆ, ನಲ್ಲಾಪುರ ಕೆರೆ, ಚಿನ್ನಾಪುರ ಕೆರೆ, ಸುಂಕ್ಲಮ್ಮ ಕೆರೆ, ಬೈಲುವದ್ದಿಗೇರಿ ಕೆರೆ, ಕಾಕುಬಾಳುಕೆರೆ, ಗುಂಡ್ಲವದ್ದಿಗೇರಿ ಕೆರೆ, ಶಟ್ಟಿಹಳ್ಳಿಕೆರೆ, ವಡ್ಡರಹಳ್ಳಿಕೆರೆ, ಗಾದಿಗನೂರು ಕೆರೆ, ಇಂಗಳಿಗಿ ಕೆರೆ, ಕಮಲಾಪುರ ಕೆರೆ, ಮತ್ತು ರಾಯರಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳನ್ನು ಸರ್ಕಾರದ ಅನುದಾನದಿಂದ ಏತ ನೀರಾವರಿ ಯೋಜನೆಗಾಗಿ 2022-23ನೇ ಸಾಲಿನಲ್ಲಿ ಸುಮಾರು ₹247 ಕೋಟಿ ಅನುದಾನ ಬಿಡುಗಡೆ ಮಾಡಿ, ಟೆಂಡರ್‌ ಪ್ರಕ್ರಿಯೆಯು ಮುಗಿದಿದ್ದು, ಈ ಕಾಮಗಾರಿಯ ಗುತ್ತಿಗೆದಾರರು ಮತ್ತು ಸಹ ಗುತ್ತಿಗೆದಾರರು ಬೃಹತ್‌ ಜಲಮಂಡಳಿಯೊಂದಿಗೆ ಸೇರಿಕೊಂಡು ಪೈಪ್‌ಲೈನ್‌ ಕಳಪೆ ಕಾಮಗಾರಿ ಮಾಡಿದ್ದಾರೆ.

ಈ ಹಿಂದೆ ₹247 ಕೋಟಿ ಅನುದಾನ ಬಿಡುಗಡೆಯಾಗಿ ಅದರ ಸಂಪೂರ್ಣ ಕೆಲಸ ಮುಗಿದೆದೆ ಎಂದು ಅನುದಾನ ಪಡೆದುಕೊಂಡ ಗುತ್ತಿಗೆದಾರರ ವಿರುದ್ಧ ಮತ್ತು ಇದನ್ನು ಪರಿಶೀಲಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಯನ್ನು ಹೊಸ ತನಿಖಾಧಿಕಾರಿ ನೇಮಿಸುವುದರ ಜೊತೆಗೆ ಶಿಸ್ತಿನ ಕ್ರಮ ವಹಿಸಬೇಕು. ನವಲಿ ಹತ್ತಿರ ಸಮನಾಂತರ ಜಲಾಶಯವನ್ನು ನಿರ್ಮಿಸುವಂತೆ ಈ ಭಾಗದ ಎಲ್ಲ ರೈತರು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

ನವಲಿ ಸಮನಾಂತರ ಜಲಾಶಯವಾದರೆ ಸುಮಾರು 30 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗುತ್ತದೆ. ಹೊಸಪೇಟೆ ಭಾಗದಲ್ಲಿ ಸ್ಥಳೀಯ ಸಕ್ಕರೆ ಕಾರ್ಖಾನೆ 2015-16ನೇ ಸಾಲಿನಲ್ಲಿ ಮುಚ್ಚಿ ಹೋಗಿದ್ದು, ಈ ಭಾಗದಲ್ಲಿ ಸುಮಾರು 4 ರಿಂದ 5 ಲಕ್ಷ ಟನ್‌ನಷ್ಟು ಕಬ್ಬು ಬೆಳೆಯುತ್ತಿದ್ದು, 10-12 ವರ್ಷಗಳಿಂದ ಮುಂಡರಗಿ, ಸಿರುಗುಪ್ಪ, ಮೈಲಾರ, ಈ ಭಾಗದಲ್ಲಿ ಸ್ಥಳೀಯ ಕಬ್ಬನ್ನು ಸಾಗಾಟ ಮಾಡುತ್ತಿದ್ದು, ಪ್ರತಿ ಒಂದು ಟನ್ ಕಬ್ಬಿಗೆ ₹800 ರಿಂದ ₹1000 ನಷ್ಟವಾಗುತ್ತಿದೆ.

2023-24ನೇ ಸಾಲಿನಲ್ಲಿ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಹೊಸಪೇಟೆಯಲ್ಲಿ ಎಚ್.ಆರ್. ಗವಿಯಪ್ಪ ಪರವಾಗಿ ಚುನಾವಣಾ ಭಾಷಣ ಮಾಡಿ, ನೀವು ನಮ್ಮ ಸರ್ಕಾರಕ್ಕೆ ಬೆಂಬಲ ನೀಡುವುದಾದರೆ ಆದಷ್ಟು ಬೇಗನೆ ಒಂದು ವರ್ಷದೊಳಗಾಗಿ ಸಕ್ಕರೆ ಕಾರ್ಖನೆಯನ್ನು ಪ್ರಾರಂಭಗೊಳಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿಗೆ 3 ವರ್ಷಗಳು ಆದರೂ ಸಕ್ಕರೆ ಕಾರ್ಖಾನೆಯ ಬಗ್ಗೆ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ, ಶಾಸಕರಾಗಲಿ ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ರೈತ ಸಂಘದಿಂದ ರಾಜ್ಯದ ಸಚಿವರಿಗೂ ಮನವಿ ನೀಡಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ತಕ್ಷಣವೇ ಹೊಸಪೇಟೆ ಭಾಗಕ್ಕೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಟಿ. ನಾಗರಾಜ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಸೇರಿದಂತೆ ಅನೇಕ ರೈತರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.