ಪ್ರತಿ ಟನ್ ಕಬ್ಬಿಗೆ ₹ 5,500 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.
ಗುತ್ತಲ: ಪ್ರತಿ ಟನ್ ಕಬ್ಬಿಗೆ ₹ 5,500 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ತಿಳಿಸಿದ್ದಾರೆ.
ಪಟ್ಟಣದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರು ಹಾಗೂ ರೈತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿಗೆ ಟನ್‌ಗೆ ₹ 5,500 ದರ ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಉತ್ತರ ಕರ್ನಾಟಕದಾದ್ಯಂತ ಕಬ್ಬಿಗೆ ಪ್ರದೇಶ ಅಥವಾ ರಿಕವರಿ ಹೆಸರಿನಲ್ಲಿ ವ್ಯತ್ಯಾಸ ಮಾಡದೇ ಏಕರೂಪ ದರ ವ್ಯವಸ್ಥೆ ಜಾರಿಗೊಳಿಸಬೇಕು.
ಕಾರ್ಖಾನೆಗಳೇ ರಿಕವರಿ ಪ್ರಮಾಣ ನಿರ್ಧರಿಸುವುದನ್ನು ತಪ್ಪಿಸಿ, ಸ್ವತಂತ್ರ ಪ್ರಯೋಗಾಲಯ ಸ್ಥಾಪಿಸಬೇಕು ಮತ್ತು ಪರೀಕ್ಷಾ ವರದಿಯನ್ನು ರೈತರಿಗೆ ನೀಡಬೇಕು. ಸಕ್ಕರೆ ಕಾರ್ಖಾನೆಗಳ ಪ್ರವೇಶದ್ವಾರದಲ್ಲೇ ಸರ್ಕಾರಿ ನಿಯಂತ್ರಣದ ಪ್ರತ್ಯೇಕ ತೂಕದ ಯಂತ್ರ ಅಳವಡಿಸಿ, ತಕ್ಷಣ ರಸೀದಿ ನೀಡಬೇಕು. ಕಬ್ಬು ಸರಬರಾಜು ಮಾಡಿದ ಬಾಕಿ ಹಣವನ್ನು ಕಾಲಮಿತಿಯಲ್ಲಿ ಪಾವತಿಸಬೇಕು ಮತ್ತು ಕಬ್ಬಿನ ಗುಣಮಟ್ಟ ಕಾಯ್ದುಕೊಳ್ಳಲು ನವೆಂಬರ್‌ನಲ್ಲೇ ಕಟಾವು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.ಸಭೆಯ ಉದ್ಘಾಟನೆಯನ್ನು ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಾವೇರಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಶನ್ ನಂದಿ, ಅಶೋಕರೆಡ್ಡಿ ಮರಚರೆಡ್ಡೇರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.