ಕಾರ್ಮಿಕ ವಿರೋಧಿ 4 ಕರಾಳ ಕಾರ್ಮಿಕ ಸಂಹಿತೆ ಕೂಡಲೇ ಹಿಂಪಡೆಯಲು ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಕಾರವಾರ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ 4 ಕರಾಳ ಕಾರ್ಮಿಕ ಸಂಹಿತೆಗಳನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ದುಡಿಯುವ ಜನರ ಹಕ್ಕುಗಳು ಮತ್ತು ಬದುಕಿನ ಮೇಲೆ ಸರ್ಕಾರ ನಡೆಸುತ್ತಿರುವ ದಾಳಿ ಖಂಡಿಸಿದ ಪ್ರತಿಭಟನಾಕಾರರು, ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ವೇತಾ ಕಪಾಡಸ್ಕರ, ಸಾರ್ವಜನಿಕ ವಲಯದ ಉದ್ಯಮ ಮತ್ತು ಸೇವೆಗಳನ್ನು ಖಾಸಗೀಕರಿಸಿ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೇಂದ್ರ ಸರ್ಕಾರದ ವಿವಿಧ ಸ್ಕೀಂಗಳಲ್ಲಿ ದುಡಿಯುವ ಕೋಟ್ಯಾಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ, ಪಿಎಫ್, ಇಎಸ್‌ಐ ಮತ್ತು ನಿವೃತ್ತಿ ಪರಿಹಾರಗಳನ್ನು ಒದಗಿಸದೇ ಬಿಡಿಗಾಸಿನಲ್ಲಿ ದುಡಿಸಿಕೊಂಡು ಶೋಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಿದ್ಯುತ್ ತಿದ್ದುಪಡಿ ಮಸೂದೆ-2025ರ ಮೂಲಕ ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸಲು ಮುಂದಾಗಿರುವುದು ಮತ್ತು ಕಾರ್ಮಿಕರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ ಲೇಬರ್ ಕೋಡ್‌ಗಳನ್ನು ಜಾರಿಗೊಳಿಸುತ್ತಿರುವುದು ಕಾರ್ಮಿಕರ ಪಾಲಿಗೆ ಮರಣಶಾಸನವಾಗಿದೆ. ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಳ ಮತ್ತು ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವ ನೀತಿಗಳು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಮಾರಕವಾಗಿವೆ ಎಂದು ಕಿಡಿಕಾರಿದರು.ಇನ್ನು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೂ ಸರ್ಕಾರಿ ನೌಕರರ ಸ್ಥಾನಮಾನ ನೀಡಿ, ಕನಿಷ್ಠ ವೇತನ, ಪಿಎಫ್, ಇಎಸ್‌ಐ ಜಾರಿಗೊಳಿಸಬೇಕು. ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಸಂಘದ ಜಿಲ್ಲಾ ಮುಖಂಡರಾದ ನಿವೇದಿತಾ ಕೊಳಂಬಕರ್, ಅಸಂಘಟಿತ ವಲಯದ ಕಾರ್ಮಿಕರು ಭದ್ರತೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ವೈಶಾಲಿ ಶೇಜವಾಡಕರ್, ಲಲಿತಾ ಹಡಪದ, ಪ್ರೀತಿ ಗುನಗಾ, ಶ್ಯಾಮಲಾ ನಾಯ್ಕ, ಚೇತನಾ ಕೊಚರೆಕರ್, ನಿಂಗಮ್ಮ ಮೇಟಿ, ಸಂಪ್ರದಾ ಪಾವಸ್ಕರ್, ಸೀಮಾ ನಾಯ್ಕ, ಶೈಲಾ ಮಡಿವಾಳ, ಪೂರ್ಣಿಮಾ ನೇಕಾರ ಮುಂತಾದವರು ಇದ್ದರು.