ಕನ್ನಡಪ್ರಭ ವಾರ್ತೆ ಮದ್ದೂರು
ರೈತನಾಯಕ ಪ್ರೊ,ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆಯನ್ನು ರೈತ ಸಂಘ ಮತ್ತು ಕಸ್ತೂರಿ ಕರ್ನಾಟಕ ಜನಪದ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಿದರು.ರೈತ ಮುಖಂಡ ಜಿ.ಎ.ಶಂಕರ್ ಹಾಗೂ ಕಜವೇ ಅಧ್ಯಕ್ಷ ವಿ.ಸಿ.ಉಮಾಶಂಕರ ನೇತೃತ್ವದಲ್ಲಿ ಮಳವಳ್ಳಿ ರಸ್ತೆಯಲ್ಲಿರುವ ರೈತ ಚೈತನ್ಯ ಕೇಂದ್ರಕ್ಕೆ ತೆರಳಿದ ಕಾರ್ಯಕರ್ತರು, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಪ್ರೊ, ನಂಜುಂಡಸ್ವಾಮಿ ನಮ್ಮನ್ನು ಅಗಲಿ 22 ವರ್ಷಗಳು ಕಳೆದಿದೆ. ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ಆತ್ಮ ಗೌರವ ಮತ್ತು ಸ್ವಾಭಿಮಾನದ ಪಾಠವನ್ನು ಹೇಳಿಕೊಟ್ಟ ಮೇಷ್ಟ್ರು ಎಂದು ನಂಜುಂಡಸ್ವಾಮಿಯವರು ಖ್ಯಾತಿ ಹೊಂದಿದ್ದರು ಎಂದು ಬಣ್ಣಿಸಿದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, 1980ರ ದಶಕದಲ್ಲಿ ನರಗುಂದ ಮತ್ತು ನವಿಲುಗುಂದದಲ್ಲಿ ನಡೆದ ರೈತ ಚಳವಳಿ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಸರ್ಕಾರದ ವಿರುದ್ಧ ಸೆಟೆದು ನಿಂತು ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನಂಜುಂಡಸ್ವಾಮಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡ ರಾದಬೋರಾಪುರ ಶಂಕರಗೌಡ, ಲಿಂಗಪ್ಪಾಜಿ, ಹಲಗೂರು ಶ್ರೀನಿವಾಸ್, ಶೆಟ್ಟಿಹಳ್ಳಿ ರವಿಕುಮಾರ್, ಚಂದ್ರಶೇಖರ್, ಸಿದ್ದೇಗೌಡ, ವಿನೋದ್ ಬಾಬು, ದೇವರಾಜು, ಸಾವಿತ್ರಮ್ಮ, ಕಜವೇ ಮುಖಂಡರಾದ ಎಂ. ಸಿ .ಲಿಂಗರಾಜು, ವಿ.ಎಚ್. ಶಿವಲಿಂಗಯ್ಯ, ಸೋಂಪುರ ಉಮೇಶ್, ವಿ .ಎಂ .ಶಿವಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.