ಸಚಿವ ಮುನಿಯಪ್ಪ ಕಡೆಗಣಿಸಿದಲ್ಲಿ ‘ಕೈ’ ಗೆ ಶಾಸ್ತಿ

| Published : Mar 29 2024, 12:46 AM IST

ಸಚಿವ ಮುನಿಯಪ್ಪ ಕಡೆಗಣಿಸಿದಲ್ಲಿ ‘ಕೈ’ ಗೆ ಶಾಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕೇವಲ ಎರಡು, ಮೂರು ಪ್ರತಿಶತದಷ್ಟಿರುವ ಬ್ರಾಹ್ಮಣ ಸಮುದಾಯದ ಮಾತು ಕೇಳಿ ನಮ್ಮ ದೊಡ್ಡ ಸಮಾಜಕ್ಕೆ ಎದುರು ಹಾಕಿಕೊಂಡಲ್ಲಿ ಕಾಂಗ್ರೆಸ್‌ಗೆ ತಕ್ಕ ಶಾಸ್ತಿಯಾಗುವುದರಲ್ಲಿ ಸಂದೇಹವಿಲ್ಲ. ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ರೋಹಿದಾಸ ಘೋಡೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

7 ಸಲ ಸಂಸದರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ನಮ್ಮ ಸಮಾಜದ ಹಿರಿಯ ಮುತ್ಸದ್ಧಿ ಕೆ.ಎಚ್‌ ಮುನಿಯಪ್ಪ ಅವರನ್ನು ಪಕ್ಷ ಕಡೆಗಣಿಸಿದ್ದೆಯಾದಲ್ಲಿ ಮುಂಬರುವ ದಿನಗಳಲ್ಲಿ ಇಡೀ ಮಾದಿಗ ಸಮಾಜ ಕಾಂಗ್ರೆಸ್‌ ವಿರುದ್ಧ ತಿರುಗಿ ಬೀಳಲಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರಾದ ರೋಹಿದಾಸ ಘೋಡೆ ಎಚ್ಚರಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಚ್‌ ಮುನಿಯಪ್ಪ ನಮ್ಮ ಸಮಾಜದ ಹಿರಿಯ ನಾಯಕರು. ಅವರನ್ನು ರಾಜಕೀಯವಾಗಿ ಮುಗಿಸಲು ಮಾಜಿ ಸ್ಪೀಕರ್‌ ರಮೇಶಕುಮಾರ ಅವರು ಹಿಂಬಾಗಿಲಿನಿಂದ ಕಾಂಗ್ರೆಸ್‌ ವರಿಷ್ಠರಿಗೆ ಬ್ಲಾಕಮೇಲ್‌ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಕೇವಲ ಎರಡು, ಮೂರು ಪ್ರತಿಶತದಷ್ಟಿರುವ ಬ್ರಾಹ್ಮಣ ಸಮುದಾಯದ ಮಾತು ಕೇಳಿ ನಮ್ಮ ದೊಡ್ಡ ಸಮಾಜಕ್ಕೆ ಎದುರು ಹಾಕಿಕೊಂಡಲ್ಲಿ ಕಾಂಗ್ರೆಸ್‌ಗೆ ತಕ್ಕ ಶಾಸ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಇಡೀ ಕಲ್ಯಾಣ ಕರ್ನಾಟಕದಲ್ಲಿ ಮಾದಿಗ ಸಮಾಜದ ಒಬ್ಬರಿಗೂ ನಿಗಮ ಮಂಡಳಿಗಳಲ್ಲಿ ಜಾಗ ಕೊಟ್ಟಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸಹ ನಮ್ಮ ಸಮಾಜದವರಿಗೆ ಟಿಕೆಟ್‌ ನೀಡಲಿಲ್ಲ ಎಂದು ಆರೋಪಿಸಿದರು.

ಇನ್ನೂ ಕಾಲ ಮಿಂಚಿಲ್ಲ. ಕೆ.ಎಚ್ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಲೋಕಸಭೆ ಟಿಕೇಟ್ ನೀಡಬೇಕು. ಪಕ್ಷದ ವಿರುದ್ಧ ಬೀದಿಗಿಳಿಯುವುದಾಗಿ ಎಚ್ಚರಿಕೆ ನೀಡಿದರು.

ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಹಿರಿಯರಾದ ಶಾಮಣ್ಣ ಬಂಬುಳಗಿ ಹಾಗೂ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಹೆಗಡೆ ಮಾತನಾಡಿದರು.ಕಲ್ಯಾಣ ಕರ್ನಾಟಕದಲ್ಲಿ ಒಂದೂ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿಲ್ಲ. ಮಂತ್ರಿ ಮಂಡಲದಲ್ಲೂ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ. ನಮ್ಮ ಬೇಡಿಕೆಗಳಿಗಂತೂ ಕ್ಯಾರೆ ಎನ್ನುತ್ತಿಲ್ಲ. ಕೆ.ಎಚ್ ಮುನಿಯಪ್ಪ ಕುಟುಂಬವನ್ನು ರಾಜಕೀಯದಿಂದ ದೂರ ಇಡುವ ಹುನ್ನಾರ ನಡೆಸಲಾಗುತ್ತಿದೆ. ಗುರುವಾರ ಸಂಜೆಯೊಳಗೆ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಲೋಕಸಭೆ ಟಿಕೆಟ್‌ ನೀಡದಿದ್ದರೆ ಮಾದಿಗ ಸಮಾಜ ಲೋಕಸಭೆ ಚುನಾವಣೆಯಲ್ಲಿ ತನ್ನ ತಾಕತ್ತು ತೋರಿಸುವುದು ಗ್ಯಾರಂಟಿ.

ಫರ್ನಾಂಡಿಸ್ ಹಿಪ್ಪಳಗಾಂವ್‌, ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ