ಸಾರಾಂಶ
ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ರು. 2900 ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸಿದರು.
ಮುಂಡರಗಿ: ತಾಲೂಕಿನ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರದ ಪ್ರಕಾರ ರೈತರಿಗೆ ಹಣ ಕೊಡಬೇಕು ಎಂದು ರಾಜ್ಯಕಬ್ಬು ಬೆಳೆಗಾರೆ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಒತ್ತಾಯಿಸಿದರು.
ಸೋಮವಾರ ಮುಂಡರಗಿಯಲ್ಲಿ ಕಬ್ಬು ಬೆಳೆಗಾರ ರೈತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಎಫ್ಆರ್ಪಿ ಪ್ರಕಾರ ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯವರು ರಿಕವರಿ 9.59 ಮಾಡಿದ್ದು, ಅದರ ಪ್ರಕಾರ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹3182 ಘೋಷಣೆಯಾಗಿದೆ. ಇದರಲ್ಲಿ ಕಾರ್ಖಾನೆಯವರು ರೈತರಿಗೆ ಕಟಿಂಗ್ ಹಾಗೂ ಟ್ರಾನ್ಸ್‌ಫೋರ್ಟ್ ಹೊರತುಪಡಿಸಿ ರೈತರಿಗೆ ₹2550 ನೀಡುವುದಾಗಿ ಹೇಳಿದ್ದಾರೆ. ಈ ದರ ಬೇರೆ ಬೆಳೆಗಳಿಗೆ ಹೋಲಿಸಿದರೆ ನಾಲ್ಕು ತಿಂಗಳ ಬೆಳೆಗಳಾದ ಭತ್ತ, ಮೆಕ್ಕೆ ಜೋಳದ ದರಕ್ಕಿಂತ ಕಡಿಮೆ ಎಂದೆನಿಸುತ್ತದೆ. ಆದ್ದರಿಂದ ಕಾರ್ಖಾನೆಯವರು ಪ್ರತಿ ಟನ್ ಕಬ್ಬಿಗೆ ₹2900 ನಿಗದಿಪಡಿಸಬೇಕು. ಒಂದು ವೇಳೆ ವಿಜಯನಗರ ಸಕ್ಕರೆ ಕಾರ್ಖಾನೆಯವರು ನಮ್ಮ ಬೇಡಿಕೆಯನ್ನು ಏಳು ದಿನಗಳ ಒಳಗಾಗಿ ಈಡೇರಿಸದೆ ಇದ್ದಲ್ಲಿ, ಎಲ್ಲ ಕಬ್ಬು ಬೆಳೆಗಾರ ರೈತರು ಸೇರಿಕೊಂಡು ಅ. 28ರಂದು ವಿಜಯನಗರ ಸಕ್ಕರೆ ಕಾರ್ಖಾನೆ ಎದುರಿನಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿಕುಮಾರ ಕೊಳಲ, ಉಪಾಧ್ಯಕ್ಷ ಮಾಬೂಸಾಬ್ ಬಳ್ಳಾರಿ, ತಾಲೂಕಾಧ್ಯಕ್ಷ ಹನುಮಂತಪ್ಪ ಚೂರಿ, ಪ್ರಕಾಶ ಸಜ್ಜನರ, ಹುಸೇನಸಾಬ್ ಕುರಿ, ಪ್ರವೀಣ ಹಂಚಿನಾಳ, ಮಂಜುನಾಥ ತಂಟ್ರಿ, ಸಂತೋಷ ಹಳ್ಳಿ, ವಿಶ್ವನಾಥ ಶಿರಹಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.