ನಾಡಗೌಡರಿಗೆ ಸಚಿವ ಸ್ಥಾನ ನೀಡಲು ಆಗ್ರಹ

| Published : Nov 08 2025, 03:00 AM IST

ಸಾರಾಂಶ

ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಶಾಸಕ ಸಿ.ಎಸ್.ನಾಡಗೌಡರನ್ನು ಪರಿಗಣಿಸಬೇಕು. ಈ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮುದ್ದೇಬಿಹಾಳದ ದಿ ಅಡತ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕೆಎಸ್‌ಡಿಎಲ್‌ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮುಖಂಡರಾಗಿ 6 ಬಾರಿ ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾಗಿ ಅನುಭವಿ ರಾಜಕಾರಿಣಿಯಾಗಿದ್ದಾರೆ. ಹೀಗಾಗಿ ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಅವರನ್ನು ಪರಿಗಣಿಸಬೇಕು. ಈ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮುದ್ದೇಬಿಹಾಳದ ದಿ ಅಡತ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಆಗ್ರಹಿಸಿದೆ.

ಈ ಕುರಿತು ಶುಕ್ರವಾರ ಸಭೆ ಮಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಮೊದಲು ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅವರನ್ನು ಕೈಬಿಡಲಾಯಿತು. ಆದರೆ, ಈ ಬಾರಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅದಕ್ಕಾಗಿ ಸಂಪುಟ ಪುನಾರಚನೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಸಿ.ಎಲ್‌.ಬಿರಾದಾರ ಮತ್ತು ಕಾರ್ಯದರ್ಶಿ ಆರ್‌.ಎಸ್‌ ಬಾಗೇವಾಡಿ ಅವರು ಆಗ್ರಹಿಸಿದ್ದಾರೆ.

ಸಿ.ಎಸ್‌.ನಾಡಗೌಡರು ಪಕ್ಷದ ಉಪಾಧ್ಯಕ್ಷರಾಗಿ, ವಿಧಾನ ಸಚೇತಕರಾಗಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ಪಕ್ಷ ನಿಷ್ಠೆಯಿಂದ ಪಕ್ಷ ಕಟ್ಟುವ ಮೂಲಕ ಕೇಂದ್ರದ ಹಾಗೂ ರಾಜ್ಯದ ಹಲವಾರು ಹಿರಿಯ ಮುಖಂಡರ ಅತ್ಯಂತ ಒಡನಾಡಿ ಬೆಳೆದು ಬಂದವರು. ಕೇವಲ ಪಕ್ಷಕ್ಕಾಗಿ ದುಡಿದಿದ್ದಲ್ಲದೆ, ಕ್ಷೇತ್ರದಲ್ಲಿ ಜನರ ಸಂಕಷ್ಟದಲ್ಲಿಯೂ ಅವರು ಭಾಗಿಯಾಗಿದ್ದಾರೆ. ಜತೆಗೆ ನಾಗರಬೆಟ್ಟ ಏತನಿರಾವರಿ, ಪೀರಾಪೂರ ಏತ ನಿರಾವರಿ, ದ್ವಿಪಥ ರಸ್ತೆ, ಕೆರೆ ತುಂಬುವ ಯೋಜನೆ, ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆ, ದೇವರಾಜ ಅರಸು ಹೊಸ ಶಾಲೆಗಳ ಮಂಜೂರಾತಿ, ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಂತಹ ಹತ್ತು ಹಲವಾರು ಯೋಜನೆಗಳನ್ನು ತಮ್ಮ ಅವಧಿಯಲ್ಲಿ ತರುವ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ಇಷ್ಟು ಮಾತ್ರವಲ್ಲ, ಕೆಎಸ್‌ಡಿಎಲ್‌ ನಿಗಮದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಕೆಎಸ್‌ಡಿಎಲ್‌ ನಿಗಮವನ್ನು ಲಾಭದಾಯಕವನ್ನಾಗಿ ಮಾಡಿ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ಕೊಡುವ ಮೂಲಕ ಶ್ರೇಷ್ಠತೆ ಮೆರೆದಿದ್ದಾರೆ. ಅವರ ಪ್ರಬುದ್ಧತೆಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಅವರನ್ನು ಪರಿಗಣಿಸಿ ಮಣೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಸಭೆಯಲ್ಲಿ ಎ.ಆರ್‌.ಕಡಿ, ಎಚ್‌.ಟಿ.ಬಿರಾದಾರ, ಎಂ.ಬಿ.ಬಿರಾದಾರ, ಎಸ್‌.ಎಸ್‌.ರಕ್ಕಸಗಿ, ಜಿ.ವೈ.ಇಲ್ಲೂರ, ನಿಂಗರೆಡ್ಡಿ, ಎಂ.ಎನ್‌.ಪಾಟೀಲ, ಬಿ.ಎಸ್‌.ಬಿರಾದಾರ, ಬಿ.ಸಿ.ಬೆಲ್ಲದ, ಎಸ್‌.ಎಸ್‌.ಕುಂಟೋಜಿ ಸೇರಿದಂತೆ ಹಲವರು ಹಾಜರಿದ್ದರು.