ಕಬ್ಬಿಗೆ ರು. 5000 ಬೆಂಬಲ ಬೆಲೆ ನೀಡುವಂತೆ ಮನವಿ

| Published : Sep 18 2024, 01:49 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯಗೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ್‌ ಒತ್ತಾಯ. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ 100 ರುಪಾಯಿ ರೈತರ ಖಾತೆಗಳಿಗೆ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೇಂದ್ರ ಸರ್ಕಾರ ಕಬ್ಬಿಗೆ ಅವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಿದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ 5000 ರುಪಾಯಿ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ನಗರದ ಪೊಲೀಸ್ ಮೈದಾನದ ಬಳಿ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ರಾಜ್ಯ ಸಚಿವ ಸಂಪುಟ ಸಭೆಗಾಗಿ ಆಗಮಿಸಿರುವ ಸಿಎಂಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಚಿಂಚೋಳಿ ತಾಲೂಕಿನ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಮಾಲಿನ್ಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್ ಮಾಡಿದ್ದರಿಂದ ಆ ಭಾಗದಲ್ಲಿ ಕಬ್ಬು ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ 100 ರುಪಾಯಿ ರೈತರ ಖಾತೆಗಳಿಗೆ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ಭೀಮಾ ನದಿಗೆ ಬಚಾವತ್ ಆಯೋಗದ ಪ್ರಕಾರ 15 ಟಿಎಂಸಿ ಪಾಲಿನ ನೀರು ಬರುತ್ತಿಲ್ಲ. ಈ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು, ಅಫಜಲ್ಪುರ ತಾಲೂಕಿನ ಘೂಳನೂರ ಬಳಿ ಕಟ್ಟಲಾಗಿರುವ ಬ್ರೀಜ್ ಕಂ ಬ್ಯಾರೇಜ್ ಕಾಮಗಾರಿ ಶೇ.90ರಷ್ಟು ಮುಗಿದಿದ್ದು, ಬಾಕಿ ಉಳಿದ ಕಾಮಗಾರಿ ಮುಗಿಸಬೇಕು ಮತ್ತು ಬ್ಯಾರೇಜ್‍ನ ಅಕ್ಕಪಕ್ಕದ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ರೈತರ ಪೈಕಿ ಇನ್ನೂ ಶೇ.40ರಷ್ಟು ರೈತರಿಗೆ ಬರ ಪರಿಹಾರ ಬಂದಿಲ್ಲ, ಜೆಸ್ಕಾಂನವರು ರೈತರಿಂದ ಹಣ ಕಟ್ಟಿಸಿಕೊಂಡು ಪಂಪ್‌ಸೆಟ್‍ಗಳಿಗೆ ಆರ್‌ಆರ್ ನಂಬರ್ ಕೊಡುವುದಾಗಿ ಹೇಳಿ ಇನ್ನೂ ಕೊಟ್ಟಿಲ್ಲ. ಹೀಗಾಗಿ ಅದರ ಕುರಿತು ಕ್ರಮ ಕೈಗೊಳ್ಳಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಪಾಟೀಲ್, ಧರ್ಮರಾಜ್ ಸಾಹು, ಭಾಗಣ್ಣ ಕುಂಬಾರ, ಶರಣು ಬಿಲ್ಲಾಡ, ಸಂತೋಷ ಪಾಟೀಲ್, ಬಸವರಾಜ ವಾಳಿ, ನಾಗೇಂದ್ರರಾವ್ ದೇಶಮುಖ, ಲಕ್ಷ್ಮೀಪುತ್ರ ಮನವಿ ಇದ್ದರು.