ಮಹಾಬೋಧಿ ಮಹಾವಿಹಾರದ ಆಡಳಿತ ಬೌದ್ಧರಿಗೆ ನೀಡುವಂತೆ ಆಗ್ರಹ

| Published : Nov 27 2024, 01:00 AM IST

ಮಹಾಬೋಧಿ ಮಹಾವಿಹಾರದ ಆಡಳಿತ ಬೌದ್ಧರಿಗೆ ನೀಡುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ ರಾಜ್ಯದ ಬುದ್ಧಗಯಾ ಜಗತ್ತಿನ ಎಲ್ಲಾ ಬೌದ್ಧರಿಗೆ ಪವಿತ್ರವಾದ ಸ್ಥಳ. ಕ್ರಿ.ಪೂ. ೬ನೇ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮನು ತನ್ನ ೩೫ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಭಗವಾನ್ ಬುದ್ಧರಾದ ಪುಣ್ಯಸ್ಥಳ. ಈ ಸ್ಥಳ ಆ ಕಾಲದಿಂದ ಪೂಜನೀಯವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಬಿ.ಟಿ. ಆ್ಯಕ್ಟ್-೧೯೪೯ ರದ್ದುಗೊಳಿಸಿ ಮತ್ತು ಮಹಾಬೋಧಿ ಮಹಾ ವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಅಖಿಲ ಭಾರತ ಬೌದ್ಧ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಮಲ್ಲಯ್ಯ ಮಾಧ್ಯಮದೊಂದಿಗೆ ಮಾತನಾಡಿ, ಬಿಹಾರ ರಾಜ್ಯದ ಬುದ್ಧಗಯಾ ಜಗತ್ತಿನ ಎಲ್ಲಾ ಬೌದ್ಧರಿಗೆ ಪವಿತ್ರವಾದ ಸ್ಥಳ. ಕ್ರಿ.ಪೂ. ೬ನೇ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮನು ತನ್ನ ೩೫ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಭಗವಾನ್ ಬುದ್ಧರಾದ ಪುಣ್ಯಸ್ಥಳ. ಈ ಸ್ಥಳ ಆ ಕಾಲದಿಂದ ಪೂಜನೀಯವಾಗಿದೆ. ಕ್ರಿ.ಪೂ. ೩ನೇ ಶತಮಾನದಲ್ಲಿ ಮೌರ್ಯರ ಸಾಮ್ರಾಟ್ ಅಶೋಕ ಈ ಮಹಾ ವಿಹಾರವನ್ನು ಕಟ್ಟಿಸಿದ್ದಾನೆ. ಆ ಕಾಲದಿಂದಲೂ ಅನೇಕ ರಾಜ ಮಹಾರಾಜರು ಮತ್ತು ಬರ್ಮ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮುಂತಾದ ದೇಶಗಳು ಈ ಮಹಾವಿಹಾರಕ್ಕೆ ತನ್ನದೇ ಆದ ಧಾರ್ಮಿಕ ಕೊಡುಗೆ ನೀಡುತ್ತಿವೆ ಎಂದರು. ಬೌದ್ಧ ಧರ್ಮ ಭಾರತದಲ್ಲಿ ಕ್ಷೀಣಿಸುತ್ತಿದ್ದ ಅವಧಿಯಲ್ಲಿ ಇತರೆ ಧರ್ಮೀಯರು ಈ ಮಹಾವಿಹಾರವನ್ನು ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದ ತಮ್ಮ ವಶಮಾಡಿಕೊಂಡಿದ್ದಾರೆ. ೧೮೯೧ರಲ್ಲಿ ಶ್ರೀಲಂಕಾ ಉಪಾಸಕರಾದ ಅನಗಾರಿಕ ಧಮ್ಮಪಾಲ ಇವರು ಮಹಾವಿಹಾರದ ಬಿಡುಗಡೆಗಾಗಿ ಹೋರಾಟ ಮಾಡಿದ್ದಾರೆ. ಇಲ್ಲಿಯವರೆಗೆ ಬೌದ್ಧರಿಗೆ ಈ ಸ್ಥಳ ಮುಕ್ತವಾಗಿಲ್ಲ. ಮಹಾಬೋಧ ಮಹಾವಿಹಾರದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಬಿಹಾರ ಸರ್ಕಾರವು ಬಿ.ಟಿ.ಎಂ.ಸಿ. (ಬುದ್ಧ ಟೆಂಪಲ್ ಮ್ಯಾನೇಜ್‌ಮೆಂಟ್ ಕಮಿಟಿ) ೧೯೪೯ ಕಾಯ್ದೆ ಅಡಿಯಲ್ಲಿ ಒಂದು ಸಮಿತಿಯನ್ನು ರಚಿಸಿದ್ದು, ಈ ಸಮಿತಿಯಲ್ಲಿ ೪ ಹಿಂದೂಗಳು, ೪ ಬೌದ್ಧ ಸದಸ್ಯರಿದ್ದು ಮತ್ತು ಆ ಪ್ರದೇಶದ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.

ಭಾರತದಲ್ಲಿ ಆಯಾ ಧರ್ಮದ ಪುಣ್ಯ ಕ್ಷೇತ್ರಗಳ ನಿರ್ವಹಣೆ ಆಯಾ ಧರ್ಮೀಯರಿಂದಲೇ ನಿರ್ವಹಿಸುತ್ತಿರುವಾಗ, ಬೌದ್ಧರ ಪುಣ್ಯಕ್ಷೇತ್ರದಲ್ಲಿ ಮಾತ್ರ ಇತರೆ ಧರ್ಮೀಯರ ಆಡಳಿತ ಸರಿಯೇ? ಭಗವಾನ್ ಬುದ್ಧರ ಜ್ಞಾನೋದಯವಾದ ಪುಣ್ಯಕ್ಷೇತ್ರ. ಬೌದ್ಧರಿಗೆ ಸೇರಿದ್ದು, ಇದು ನಮ್ಮ ಸಂವಿಧಾನಬದ್ಧ ಹಕ್ಕು. ಭಾರತ ಸಂವಿಧಾನ ಆಚರಣೆಯ ಸಂದರ್ಭದಲ್ಲಿ ಬೌದ್ಧರಾದ ನಾವು ಧಾರ್ಮಿಕ ಹಕ್ಕಿಗಾಗಿ ಒತ್ತಾಯಿಸುತ್ತಿದ್ದೇವೆ. ಭಾರತದೇಶದ ಎಲ್ಲಾ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನ ನಡೆಯುತ್ತಿದೆ. ಈ ಆಂದೋಲನ ಮೂಲಕ ಬಿ.ಟಿ.ಎಂ.ಸಿ.-೧೯೪೯ನ್ನು ರದ್ದುಗೊಳಿಸಬೇಕು ಮತ್ತು ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಬೌದ್ಧರಿಗೆ ನೀಡಬೇಕೆಂದು ಕೇಂದ್ರ ಮತ್ತು ಬಿಹಾರ ಸರಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಕೃಷ್ಣದಾಸ್, ಎಚ್.ಎಸ್. ಕುಮಾರ್ ಗೌರವ್, ಎನ್.ಬಿ. ವೀರಭದ್ರಯ್ಯ, ಬಸವರಾಜು, ಜಯವರ್ಧನ್, ವೀರರಾಜು, ರಾಜೇಶ್, ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.