ಕನ್ನಡಪ್ರಭ ವಾರ್ತೆ ತುಮಕೂರುಬಿಡದಿ ಬಳಿ ರೈತರ ಕೃಷಿ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಚ್. ನಿಂಗಪ್ಪ ಕಾನೂನು ಬಾಹಿರವಾದ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.ಶುಕ್ರವಾರ ನಗರದ ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ವಿರೋಧಿಸಿ ಈ ತಿಂಗಳ 21 ರಂದು ಅಲ್ಲಿನ ರೈತರೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ ಪ್ರತಿಭಟನಾ ಪಾದಯಾತ್ರೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಈ ಕರಾಳ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಮುಂದಿನ ತಿಂಗಳು ಜಾರಿಗೆ ತರಲು ಉದ್ದೇಶಿಸಿರುವ 7,500 ಕ್ಕೂ ಹೆಚ್ಚು ಎಕರೆ ಭೂ ಸ್ವಾಧೀನದ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು. ಪ್ರತಿ ತಿಂಗಳು 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಾರಿಕೆಯನ್ನು ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ಜೀವನೋಪಾಯವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಅನುಮತಿ ನೀಡಬೇಕು. ಸಾರ್ವಜನಿಕ ಆಸ್ತಿಗಳಾದ ಸಿ.ಎ ನಿವೇಶನಗಳನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಿರುವ ಆರ್ಥಿಕ ದುರ್ನೀತಿಯನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಇದರ ನಡುವೆ ಮುಂದಿನ ತಿಂಗಳು 7,500 ಕ್ಕೂ ಹೆಚ್ಚು ಎಕರೆ ವಶಪಡಿಸಿಕೊಳ್ಳುವ ಕರಾಳ ಸಂಚು ನಡೆದಿದೆ. ಜೂನ್ 12 ರಂದು ಹೊರಬಿದ್ದಿರುವ ಅಧಿಸೂಚನೆಯು ಕೇವಲ 500 ಎಕರೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ತಿಂಗಳ ಒಳಗೆ ಇಡೀ ಬಿಡದಿ ಭಾಗದ ಬರೋಬ್ಬರಿ 7,481 ರಿಂದ 9,600 ಎಕರೆ ವರೆಗಿನ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ಸರ್ಕಾರಗಡುವು ನಿಗದಿಪಡಿಸಿದೆ. ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲದಿದ್ದರೂ, ಅವರ ಹಣವನ್ನು ಕೋರ್ಟ್‌ನಲ್ಲಿ ಜಮೆ ಮಾಡಿ ಜಮೀನು ಕಿತ್ತುಕೊಳ್ಳುವ ಕರಾಳ ಎಚ್ಚರಿಕೆಯನ್ನು ಸರ್ಕಾರ ನೀಡುತ್ತಿದೆ ಎಂದು ಸರ್ಕಾರದ ಧೋರಣೆ ಖಂಡಿಸಿದರು.

ಈ ಇಡೀ ವಲಯವು ಹಸಿರು ಭೂಮಿಯಾಗಿದ್ದು, ಹೈನುಗಾರಿಕೆಯೇ ಇಲ್ಲಿನ ಜನರ ಪ್ರಮುಖ ಜೀವನಾಧಾರವಾಗಿದೆ. ಈ ಯೋಜನೆಯಿಂದಾಗಿ ಪ್ರತಿ ತಿಂಗಳು ಉತ್ಪಾದನೆಯಾಗುತ್ತಿದ್ದ ಬರೋಬ್ಬರಿ 6 ಲಕ್ಷ ಲೀಟರ್ ಹಾಲು ಸಂಪೂರ್ಣವಾಗಿ ನಿಂತು ಹೋಗಲಿದ್ದು, ರಾಜ್ಯದ ಹಾಲಿನ ಮಾರುಕಟ್ಟೆಗೆದೊಡ್ಡ ಹೊಡೆತ ಬೀಳಲಿದೆ. ಈ ಭಾಗದ ಶೇಕಡ 50 ಕ್ಕೂ ಹೆಚ್ಚು ಕುಟುಂಬಗಳು ಕೇವಲ ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಾರಿಕೆಯನ್ನು ನಂಬಿ ಸ್ವಾವಲಂಬಿ ಬದುಕು ನಡೆಸುತ್ತಿವೆ. ಬಡರೈತರ ಭೂಮಿಯನ್ನುಕನಿಷ್ಠ ಬೆಲೆಗೆ ಕಸಿದುಕೊಂಡು, ಬರೋಬ್ಬರಿ ರು. 33,562 ಕೋಟಿ ಕೊಳ್ಳೆ ಹೊಡೆಯಲು ಸರ್ಕಾರ ತೀರ್ಮಾನಿಸಿದೆ. ಸ್ವತಃ ಸರ್ಕಾರದ ಹಣಕಾಸು ಇಲಾಖೆ ಇದು ಕೇವಲ ಒಂದು ವಾಣಿಜ್ಯ ರಿಯಲ್‌ ಎಸ್ಟೇಟ್‌ ಯೋಜನೆ ಎಂದು ಲಿಖಿತವಾಗಿ ತೀವು ವಿರೋಧ ವ್ಯಕ್ತಪಡಿಸಿದ್ದರೂ, ಮುಖ್ಯಮಂತ್ರಿಗಳು ಹಠಕ್ಕೆ ಬಿದ್ದು ರು. 9,011 ಕೋಟಿಗಳ ಸರ್ಕಾರಿ ಗ್ಯಾರಂಟಿ ನೀಡಿದ್ದಾರೆ. ಈ ಯೋಜನೆಗಾಗಿ ಬಿ.ಡಿ.ಎ ಮತ್ತು ಬಿ.ಎಂ.ಆರ್.ಡಿ.ಎ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಬಳಕೆಯ ಆಸ್ತಿಗಳನ್ನು ಬರೋಬ್ಬರಿ 3,650 ಕೋಟಿ ಮೌಲ್ಯಕ್ಕೆ ಹುಡ್ಕೊ ಬ್ಯಾಂಕಿನಲ್ಲಿ ಅಡಮಾನ ಇಡಲಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ರಾಜ್ಯ ಎಸ್ಟಿ ಘಟಕ ಉಪಾಧ್ಯಕ್ಷ ಸೋಲಾರ್‌ ಕೃಷ್ಣಮೂರ್ತಿ, ನಗರ ಅಧ್ಯಕ್ಷ ಟಿ.ಎಚ್. ಜಯರಾಮ್ ಮಹಿಳಾ ಘಟಕ ಜಿಲ್ಲಾಧ್ಯಕ್ಷ ರೇಖಾ ರಾಜ್‌ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಟಿ.ಎಸ್. ಮೋಹನ್‌ಕುಮಾರ್, ಟಿ.ಸಿ.ಪ್ರಭಾಕರ್, ಪ್ರಮೋದ್‌ಗೌಡ, ವಿನೋದ್ ಹಾಜರಿದ್ದರು.

----------------------------------------------

ಪೋಟೋ: ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಚ್. ನಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.