ಯತೀಂದ್ರ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಟಿಕೆಟ್ ನೀಡಲು ಆಗ್ರಹ

| Published : May 27 2024, 01:03 AM IST / Updated: May 27 2024, 01:41 PM IST

ಸಾರಾಂಶ

ರಾಜ್ಯ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವರುಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಅವರಿಗೆ ಟಿಕೆಟ್ ನೀಡಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಮನವಿ ಮಾಡಿದರು.

  ನಂಜನಗೂಡು :  ರಾಜ್ಯ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವರುಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಅವರಿಗೆ ಟಿಕೆಟ್ ನೀಡಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಮನವಿ ಮಾಡಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರುಣ ಶಾಸಕರಾಗಿ ಐದು ವರ್ಷಗಳ ಕಾಲ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಸಾಕಷ್ಟು ಶ್ರಮಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಮಾತಿಗೆ ತಲೆಬಾಗಿ ಯಾವುದೇ ಆಕ್ಷೇಪವಿಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ.

 ಜೊತೆಗೆ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಲ್ಲದೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಪ್ರಮುಖ ಪಾತ್ರವಹಿಸಿದ್ದಾರೆ. ಆದ್ದರಿಂದ ಎಲ್ಲಾ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವ ಯತೀಂದ್ರ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಈ ಭಾಗದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವರಿಷ್ಠರಲ್ಲಿ ಅವರು ಮನವಿ ಮಾಡಿದ್ದಾರೆ.

ಕುರುಬರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುರಿಹುಂಡಿ ರಾಜು ಮಾತನಾಡಿ, ಮುಖ್ಯಮಂತ್ರಿಗಳು ರಾಜ್ಯದಾದ್ಯಂತ ಸುತ್ತಾಟ ನಡೆಸಬೇಕಾದ ಕಾರಣ ಅವರಿಗೆ ಜಿಲ್ಲೆಯ ಸಾರ್ವಜನಿಕರಿಗೆ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಕಾಲ ಸ್ಪಂದಿಸುತ್ತಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಂವಿಧಾನಿಕ ಹುದ್ದೆಯಾದ ವಿಧಾನ ಪರಿಷತ್ ಸ್ಥಾನ ನೀಡುವುದರಿಂದ ಹಳೆ ಮೈಸೂರು ಭಾಗವಾದ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಯ ಸಾರ್ವಜನಿಕರಿಗೆ ಸೇವೆ ಒದಗಿಸಲು ಅನುಕೂಲವಾಗಲಿದೆ, ಆದ್ದರಿಂದ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಸ್ವಾಮಿ, ನಗರ್ಲೆ ಗುರುಪಾದು, ಸಂದೀಪ್, ಎಚ್.ಎಂ. ಕೃಷ್ಣ, ಆರ್. ಮಹದೇವ್, ನೀಲ್ಲಿಸಿದ್ದು, ಒಬೇದುಲ್ಲಾ, ರಾಜಣ್ಣ ಇದ್ದರು.

ಯತೀಂದ್ರಗೆ ಪರಿಷತ್‌ ಸ್ಥಾನ ನೀಡಲು ಆಗ್ರಹ

 ನಂಜನಗೂಡು :  ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ನೀಡಿ, ಮಂಡ್ಯ ಮೈಸೂರು ಚಾಮರಾಜನಗರ ಹಾಸನ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅತಿ ಹೆಚ್ಚಿನ ಶಾಸಕರು ಆಯ್ಕೆಯಾಗಲು ಕಾರಣೀಭೂತರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯರವರಿಗೆ ವಿಧಾನ ಪರಿಷತ್ ಸ್ಥಾನಮಾನ ನೀಡಬೇಕು ಎಂದು ರಾಜ್ಯ ಆಹಾರ ನಿಗಮ ಮಾಜಿ ನಿರ್ದೇಶಕ ತಮ್ಮಣ್ಣೆಗೌಡ ಆಗ್ರಹಿಸಿದ್ದಾರೆ.ಹಳೆ ಮೈಸೂರು ಭಾಗದ 5 ಜಿಲ್ಲೆಗಳಲ್ಲಿ ಕುರುಬ ಜನಾಂಗದ ಪ್ರಬಲ ನಾಯಕರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ಆ ಸ್ಥಾನಮಾನವನ್ನು ಯತೀಂದ್ರ ಸಿದ್ದರಾಮಯ್ಯ ಅವರು ತುಂಬುವ ಮೂಲಕ ಪ್ರಬಲ ನಾಯಕರಾಗಿ ರೂಪುಗೊಳ್ಳಲಿದ್ದಾರೆ. ತಮ್ಮ ಸಂಘಟನಾ ಚಾತುರ್ಯದಿಂದ ಐದು ಜಿಲ್ಲೆಗಳಲ್ಲಿ ಎಲ್ಲಾ ಜನಾಂಗದವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ ಎಂದರು.

ಈ ವೇಳೆ ಕುರಿಹುಂಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ‌. ಆನಂದ್, ಮುಖಂಡರಾದ ಸುರೇಶ್, ಸೋಮಶೇಖರ್, ಪ್ರಕಾಶ್, ಜವರೇಗೌಡ ಇದ್ದರು.