ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ಕೋಟಿ ಕೋಟಿ ಅಕ್ರಮ ನಡೆದಿದೆ. ಈಗಾಗಲೇ ಲೋಕಾಯುಕ್ತ ತನಿಖೆಯ ವೇಳೆಯಲ್ಲಿ ಹತ್ತು ಕೋಟಿಗೂ ಅಧಿಕ ಭ್ರಷ್ಟಾಚಾರವಾಗಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಸಿಬಿಐ ಮೂಲಕ ಸಮಗ್ರ ತನಿಖೆ ನಡೆಸುವಂತೆ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆ ಬಿಡುಗಡೆ ಮಾಡಿದ ಅವರು, ಈ ಅಕ್ರಮ ದೊಡ್ಡ ಪ್ರಮಾಣದಲ್ಲಿ ಇದ್ದು, ದಾಖಲೆಯನ್ನೇ ಮುಚ್ಚಿಟ್ಟಿದ್ದಾರೆ. ಕೇಳಿದರೂ ದಾಖಲೆ ಕೊಡುತ್ತಿಲ್ಲ. ಕೊಟ್ಟಿರುವ ದಾಖಲೆಯಲ್ಲಿ ಕೋಟಿ ಕೋಟಿ ಬೋಗಸ್ ಬಿಲ್ ಮೂಲಕ ಹಣ ಪಡೆಯಲಾಗಿದೆ. ಕನಕದಾಸ ಮೂರ್ತಿ ಉದ್ಘಾಟನೆಯ ಹೆಸರಿನಲ್ಲಿಯೂ ಲಕ್ಷಾಂತರ ರುಪಾಯಿ ಬಿಲ್ ಎತ್ತಲಾಗಿದೆ. ಒಂದೇ ಕಾರ್ಯಕ್ರಮಕ್ಕೆ ಮೂರು ಬಿಲ್ ಎತ್ತಲಾಗಿದೆ. ₹20-30 ಲಕ್ಷ ಬೋಗಸ್ ಬಿಲ್ ಮಾಡಿದ್ದಾರೆ. ಒಂದೇ ಬಿಲ್ ಹಲವಾರು ಬಾರಿ ಪಾವತಿ ಮಾಡಿರುವ ಮಾಹಿತಿ ಇದೆ ಎಂದು ತಮ್ಮ ಬಳಿ ಇದ್ದ ದಾಖಲೆಯನ್ನು ತೋರಿಸಿದರು.ಇದರ ವಿರುದ್ಧ ಈಗಾಗಲೇ ಅನೇಕರು ದೂರು ನೀಡಿದ್ದಾರೆ. ಕಾಮಗಾರಿಯನ್ನೇ ಮಾಡದೆ ₹10 ಕೋಟಿ ಪಡೆದಿದ್ದು, ಲೋಕಾಯುಕ್ತ ತನಿಖೆಯಲ್ಲಿ ಈಗಾಗಲೇ ಬೆಳಕಿಗೆ ಬಂದಿದೆ. ಕಸ ವಿಲೇವಾರಿಯಲ್ಲಿಯೂ ಗೋಲ್‌ಮಾಲ್ ಮಾಡಲಾಗಿದೆ. ಕೆಟ್ಟು ನಿಂತ ವಾಹನಗಳ ಹೆಸರಿಲ್ಲಿಯೂ ಇಂಧನ ಬಿಲ್ ಪಾವತಿಸಲಾಗಿದೆ. ಬೀದಿದೀಪ ಅಳವಡಿಯಲ್ಲಿಯೂ ಲಕ್ಷಾಂತರ ರುಪಾಯಿ ಬೋಗಸ್ ಬಿಲ್ ನೀಡಿ, ಹಣ ಪಾವತಿಸಲಾಗಿದೆ. ಕೊಪ್ಪಳ ನಗರದಲ್ಲಿ ಗಣೇಶ ಚೌತಿ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದಕ್ಕೂ ಲಕ್ಷ ಲಕ್ಷ ರುಪಾಯಿ ಬಿಲ್ ನೀಡಲಾಗಿದೆ. ಅಷ್ಟು ದುಡ್ಡಿನಲ್ಲಿ ಹೊಸ ಸಿಸಿ ಕ್ಯಾಮೆರಾಗಳೇ ಬರುತ್ತಿದ್ದವು. ಆದರೆ, ಬಾಡಿಗೆ ಹಾಕಿಸಿ, ಅಕ್ರಮ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೂ ಮಾಹಿತಿ ಇರಬಹುದು. ಅವರಿಗೆ ಗೊತ್ತಿಲ್ಲದೆಯೇ ಇದೆಲ್ಲವೂ ಆಗಲು ಸಾಧ್ಯವಿಲ್ಲ. ಅದು ಏನೇ ಇರಲಿ, ಕೊಪ್ಪಳ ನಗರಸಭೆಯಲ್ಲಿ ನಡೆದಿರುವ ಕೋಟಿ ಕೋಟಿ ಅಕ್ರಮವನ್ನು ಕೂಡಲೇ ಸಿಬಿಐಗೆ ಸರ್ಕಾರ ವಹಿಸಬೇಕು. ಹಾಗೊಂದು ವೇಳೆ ಸರ್ಕಾರ ಸಿಬಿಐಗೆ ಕೊಡದೆ ಇದ್ದರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.ಮಂಜುನಾಥ ಸಾಲಿಮಠ, ಜಿ.ಎಸ್. ಗೋನಾಳ, ಮಹೇಶ ಅಲ್ಲಾನಗರ, ಶಿವಕುಮಾರ ಏಣಿಗಿ ಇದ್ದರು.