ಹಾವೇರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಯಲ್ಲಾಪುರ ಯುವತಿ ಕೊಲೆ ಖಂಡಿಸಿ, ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾವೇರಿ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಹಿಂದೂ ದಲಿತ ಯುವತಿ ರಂಜಿತಾ ಸಾವು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಹಾವೇರಿ ಪ್ರಖಂಡದ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರು ಹಿಂದೂ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡುವಂತೆ ಇಲ್ಲವೇ ಕಠಿಣ ಶಿಕ್ಷೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.ಭಜರಂಗದಳದ ಧಾರವಾಡ ವಿಭಾಗ ಸಂಯೋಜಕ ಅನಿಲ ಹಲವಾಗಲ ಮಾತನಾಡಿ, ಕಡು ಬಡತನದ ಮಧ್ಯೆಯೂ ನೂರಾರು ಮಕ್ಕಳಿಗೆ ಅನ್ನ ಹಾಕುವ ಕಾಯಕದಲ್ಲಿ ತೊಡಗಿರುವ ಹಿಂದೂ ಯುವತಿ ರಂಜಿತಾ (ದಲಿತ-ಛಲವಾದಿ ಸಮಾಜದ ಮಹಿಳೆ ಬಿಸಿಯೂಟ ಕಾರ್ಯಕರ್ತೆ) ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಮಾಪುರ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡಿ ತನ್ನ ಮಗನ ವಿದ್ಯಾಭ್ಯಾಸ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದರು. ದಲಿತ ಮಹಿಳೆಯನ್ನು ಜಿಹಾದಿ ರಫೀಕ ಕಗ್ಗೊಲೆ ಮಾಡಿರುವುದು ಖಂಡನೀಯ ಎಂದರು.ರಂಜಿತಾ ಎಂಬ ದಲಿತ ಮಹಿಳೆಯು ತನ್ನ ಮಗ ಮತ್ತು ಸಂಸಾರ ಸಾಗಿಸಲು ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ರಫೀಕ್ ಎಂಬಾತ ಜಿಹಾದಿ ಮನಸ್ಥಿತಿಯುಳ್ಳ ವ್ಯಕ್ತಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಅದಕ್ಕೆ ಒಪ್ಪದ ರಂಜಿತಾಳನ್ನು ಕಳೆದ ಜ. 3ರಂದು ರಾಮಾಪುರದ ಆಕೆಯ ಮನೆ ಮುಂಭಾಗದಲ್ಲಿ ಕತ್ತು ಕೊಯ್ದು ಕೊಲೆ ಮಾಡಿ ನೀಚ ಕೃತ್ಯವೆಸಗಿದ್ದಾನೆ. ಆ ನಂತರ ಹಿಂದೂ ಸಮಾಜದ ಆಕ್ರೋಶ ಕಂಡು ಜಿಹಾದಿ ರಫಿಕ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಂಜಿತಾಳ ಸಾವಿಗೆ ಕುಮ್ಮಕ್ಕು ನೀಡಿರುವ ಮತಾಂಧರನ್ನು ಪತ್ತೆ ಮಾಡಿ ಬಂಧಿಸಬೇಕು. ರಫೀಕನ ಕುಟುಂಬದವರನ್ನು ಜಾತಿ ನಿಂದನೆ ಪ್ರಕರಣದ ಆಧಾರದಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಭಜರಂಗದಳ ಜಿಲ್ಲಾ ಸಂಯೋಜಕ ವಿನಯ್ ಕರ್ನೂಲ್, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮೃತ್ಯುಂಜಯ ಬೆಣ್ಣಿ, ವಿಹೆಚ್‌ಪಿ ಸಹ ಕಾರ್ಯದರ್ಶಿ ಚನ್ನಬಸಪ್ಪ ಓಂಕಾರಣ್ಣನವರ, ಜಿಲ್ಲಾ ಗೋರಕ್ಷಾ ಪ್ರಮುಖ ಪ್ರವೀಣ್ ಗಾಣಿಗೇರ, ತಾಲೂಕು ಭಜರಂಗದಳ ಸಂಯೋಜಕ ಸಂತೋಷ ನೂರೊಂದಮಠ, ಶಿವರಾಜ ನವಲೆ, ಶಂಭುಲಿಂಗಯ್ಯ ಹಿರೇಮಠ, ಚಂದ್ರು ಉಪ್ಪಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.