ಸಾರಾಂಶ
ಭಟ್ಕಳ: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ದಾರುಣವಾಗಿ ಕೊಲೆಗೈದ ಕೊಲೆಗಡುಕನ ವಿರುದ್ಧ ಉತ್ತರ ಪ್ರದೇಶದ ಸರ್ಕಾರದ ಮಾದರಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿನ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಧವಾರ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಹಿಂದೂ ಸಮಾಜ ಕಠೋರವಾಗಿ ಖಂಡಿಸುತ್ತದೆ. ಇದಕ್ಕೆಲ್ಲ ಇಂತಹ ದುಷ್ಟ ಮತಾಂಧ ಶಕ್ತಿಗಳ ವಿರುದ್ಧ ಈಗಿನ ರಾಜ್ಯ ಸರ್ಕಾರದ ಮೃದು ಧೋರಣೆಯೇ ಕಾರಣವಾಗಿದೆ. ನೇಹಾ ಕೊಲೆಗೈಯುತ್ತಿರುವ ವಿಡಿಯೋ ಸಾಕ್ಷ್ಯಾಧಾರಗಳು ಇರುವುದರಿಂದ ಜಿಹಾದಿ ಮಾನಸಿಕತೆಯ ಈ ಯುವಕನನ್ನು ಕೂಡಲೇ ತ್ವರಿತ ನ್ಯಾಯಾಲದ ಮುಖಾಂತರ ವಿಚಾರಣೆ ನಡೆಸಿ ಗಲ್ಲಿಗೇರಿಸುವ ಮೂಲಕ ಅಥವಾ ಉತ್ತರ ಪ್ರದೇಶದ ಮಾದರಿಯಲ್ಲಿ ನೇರ ಕ್ರಮ ಕೈಗೊಳ್ಳಬೇಕು.ಈಗಿನ ರಾಜ್ಯ ಸರ್ಕಾರ ತುಷ್ಟೀಕರಣದಲ್ಲಿ ತೊಡಗಿದೆ. ಹಾಗಾಗಿ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ನಿರ್ದೇಶಕರಿಗೆ ರಾಜ್ಯಪಾಲರು ಸ್ಪಷ್ಟ ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಾಜಿ ಶಾಸಕ ಸುನೀಲ ನಾಯ್ಕ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿದರು. ಸಹಾಯಕ ಆಯುಕ್ತೆ ಡಾ. ನಯನಾ ಅವರು ಮನವಿ ಸ್ವೀಕರಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಶಂಕರ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ, ಪ್ರಮುಖರಾದ ರಾಜೇಶ ನಾಯ್ಕ, ದಿನೇಶ ನಾಯ್ಕ, ಸುನೀಲ ಕಾಮತ್, ಈಶ್ವರ ನಾಯ್ಕ, ಶೇಷಗಿರಿ ನಾಯ್ಕ, ಶ್ರೀನಿವಾಸ ನಾಯ್ಕ. ಕೇಶವ ನಾಯ್ಕ, ಆನಂದ ನಾಯ್ಕ ಮುಂತಾದವರಿದ್ದರು.ಮಹಿಳೆಯರಿಗೆ ರಕ್ಷಣೆ ನೀಡಲು ಮನವಿಶಿರಸಿ: ಮಹಿಳೆಯರಿಗೆ, ವಿಧ್ಯಾರ್ಥಿನಿಯರಿಗೆ ಸಮಾಜದಲ್ಲಿ ಆಗುತ್ತಿರುವ ಅನುಚಿತ ಘಟನೆಗಳಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಶಿರಸಿ ವೀರಶೈವ ಅಭಿವೃದ್ಧಿ ಸಂಘ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿ ನೇಹಾ ನಿರಂಜನ ಹಿರೇಮಠ ಎಂಬ ವಿದ್ಯಾರ್ಥಿನಿಯ ಬರ್ಬರ ಹತ್ಯೆ ನಡೆದಿದ್ದು ಖಂಡನೀಯ. ಈ ಕೃತ್ಯದಲ್ಲಿ ಭಾಗಿಯಾದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮುಂದೆ ಕೂಡ ಇಂತಹ ದುರ್ಘಟನೆ ನಡೆಯದಂತೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಹೆಚ್ಚಿನ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.