ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ನಮೂನೆ 50,53 ಹಾಗೂ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಬಡವರನ್ನು ಗುರುತಿಸಿ ಕೂಡಲೇ ಜಮೀನಿನ ಸಾಗುವಳಿ ಪತ್ರ ವಿತರಣೆ ಮಾಡುವಂತೆ ಭಾರತೀಯ ಪರಿವರ್ತನ ಸಂಘ, ಜಿಲ್ಲಾ ಶಾಖೆ ವತಿಯಿಂದ ಮಂಗಳವಾರ ತಹಸೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಭಾರತೀಯ ಪರಿವರ್ತನ ಸಂಘದ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್ ಮಾತನಾಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದ್ದ ಅನೇಕ ಮಂದಿ ಬಡವರಿದ್ದಾರೆ. ಜೀವನೋಪಯಕ್ಕಾಗಿ ಅನೇಕ ವರ್ಷಗಳಿಂದ ಜಮೀನುಗಳನ್ನು ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದರೂ ವಿಳಂಬ ಮಾಡುತ್ತಿರುವ ಕಾರಣ ಸಾಗುವಳಿ ಪತ್ರ ಕೋರಿ ಪ್ರತಿನಿತ್ಯ ತಾಲೂಕು ಕಂದಾಯ ಇಲಾಖೆಗೆ ಅಲೆದಾಡುತ್ತಿರುವುದು ದುರ್ದೈವದ ಸಂಗತಿ. ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿಯನ್ನು ಗುರುತಿಸಿ ಜಮೀನಿನ ಸಾಗುವಳಿ ಪತ್ರ ವಿತರಣೆ ಕೊಡಿಸಿ ಕೊಡಬೇಕು. ಸಾಗುವಳಿ ಪತ್ರ ನೀಡಿರುವ ಫಲಾನುಭವಿಗಳಿಗೆ ರೆವಿನ್ಯೂ ದಾಖಲಾತಿಗಳಾದ ಮ್ಯುಟೇಷನ್ ಮತ್ತು ಆರ್.ಟಿ.ಸಿ.ಗಳನ್ನು ಕ್ರಮಬದ್ದಗೊಳಿಸಬೇಕು. ಕಾರಣಾಂತರಗಳಿಂದ ಅರ್ಜಿ ಸಲ್ಲಿಸಲಾಗದ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿ ಕೊಡಬೇಕು. ತಾಲೂಕಿನ ಕೆಲ ರೈತರ ಜಮೀನುಗಳನ್ನು ಈ ಹಿಂದೆ ಕಂದಾಯ ಪಾವತಿ ಮಾಡದ್ದಿದ್ದ ಸಂದರ್ಭಕ್ಕೆ ಆರ್.ಟಿ.ಸಿ.ಗಳಲ್ಲಿ ಪಡಾ ಎಂದು ಕಲಂ ನಂ.9ರಲ್ಲಿ ನಮೂದಾಗಿರುವುದನ್ನು ಕೈ ಬಿಟ್ಟು ಸದರಿ ಸ್ವತ್ತಿನ ಸ್ವಾಧೀನ ಅನುಭವದಾರರಿಗೆ ರೆವಿನ್ಯೂ ದಾಖಲೆಗಳಲ್ಲಿ ಖಾತೆದಾರರ ಹೆಸರನ್ನು ನಮೂದಿಸಿಕೊಡಬೇಕು. ಈಗಾಗಲೇ ಸಾಗುವಳಿ ಪಡೆದುಕೊಂಡು ಆರ್.ಟಿ.ಸಿ ಹೊಂದಿರುವ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರವೇ ಸಾಮೂಹಿಕವಾಗಿ ಪೋಡಿ ದುರಸ್ತಿ ಮಾಡಿಕೊಡಬೇಕು. ಈ ಮೇಲ್ಕಂಡ ಹಕ್ಕೊತ್ತಾಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತ ಮುಂದಾಗಿ ಇನ್ನೂ 30 ದಿನಗಳ ಒಳಗಾಗಿ ಸೂಕ್ತ ಕ್ರಮ ವಹಿಸುವಂತೆ ತಹಸೀಲ್ದಾರ್‌ಗೆ ಮನವಿ ಮಾಡಿದರು.
ಬಿಪಿಎಸ್ ಜಿಲ್ಲಾಧ್ಯಕ್ಷ ಎಚ್.ಕೆಂಚರಾಯ,ಎಚ್.ಡಿ.ಈರಣ್ಣ, ಮುಖಂಡರಾದ ಹನುಮಂತರಾಯಪ್ಪ, ಹನುಮಂತರಾಯಪ್ಪ, ತಿಪ್ಪೇಸ್ವಾಮಿ, ಗೋಪಿ, ಚನ್ನಕೇಶವ, ಗೋವಿಂದ ಹಾಗೂ ಹಾಗೂ ರೈತರು ಉಪಸ್ಥಿತರಿದ್ದರು.