ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಕೊಡಲೇ ತಾಲೂಕಿನ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ವಿತರಣೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಕೊಡಲೇ ತಾಲೂಕಿನ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ವಿತರಣೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿಯ ಪೂಜಾರಪ್ಪ ಒತ್ತಾಯಿಸಿದರು.

ಸೋಮವಾರ ಇಲ್ಲಿನ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದ ನಿವಾಸಿಗಳು, ರೈತರು

ತಾಲೂಕಿನ ಕೆ.ಟಿ.ಹಳ್ಳಿ ಮುಗದಾಳಬೆಟ್ಟ ಗೊಲ್ಲರಹಟ್ಟಿ ಸ್ಥಳ ನಮಗೆ ಸೇರಿದೆ. ಸ್ಥಳೀಯ ಜಮೀನು ಮಾಲೀಕರೊಬ್ಬರು ನ್ಯಾಯಾಲಯಕ್ಕೆ ದಾವೆವೂಡಿದ್ದ ಪರಿಣಾಮ ಕಳೆದ 40ವರ್ಷದಿಂದ ವಾಸವಾಗಿದ್ದ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ನಿವಾಸಿಗಳಿಗೆ ಸರ್ಕಾರದ ಸೌಲಭ್ಯ ಮರೀಚಿಕೆ ಆಗಿತ್ತು. ನ್ಯಾಯಾಲಯ ಜು.31ರಂದು ತೀರ್ಪು ಪ್ರಕಟಿಸಿ ಕೂಡಲೇ ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆದೇಶ ಜಾರಿಪಡಿಸಿದೆ. ಆದ್ದರಿಂದ ನ್ಯಾಯಾಲಯದ ಆದೇಶ ಪಾಲನೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಮಧುಗಿರಿ ನ್ಯಾಯಾಲಯದಲ್ಲಿ ಮುಗದಾಳಬೆಟ್ಟ ಗೊಲ್ಲರ ಹಟ್ಟಿ ಪರವಾಗಿ ಕೋರ್ಟ್ ತೀರ್ಪು ಆದೇಶ ಜಾರಿಪಡಿಸಿದೆ. ಹೀಗಾಗಿ ಅಲ್ಲಿನ ನಿವಾಸಿಗಳಿಗೆ ವಾಸಿಸಲು ನಿವೇಶನ ಹಂಚಿಕೆ ಹಾಗೂ ವ್ಯವಸ್ಥಿತ ಮನೆಗಳ ನಿರ್ಮಾಣ, ಮುಖ್ಯ ರಸ್ತೆಯಿಂದ ಹಟ್ಟಿಗೆ ಹೋಗಿ ಬರಲು ರಸ್ತೆ ,ಚರಂಡಿ ನಿರ್ಮಾಣ, ಅಂಗವಾಡಿ ಕೇಂದ್ರ, ಸರ್ಕಾರಿ ಶಾಲೆ ತೆರೆಯಬೇಕು. ಮನೆಗಳ ಹಕ್ಕು ಪತ್ರ ವಿತರಣೆ ಹಾಗೂ ಇತರೆ ಸೌಲಭ್ಯ ಕಲ್ಪಿಸಿ ಜೀವನ ಮಟ್ಟ ಸುಧಾರಿಸಬೇಕು. ಗ್ರಾಪಂನಿಂದ ಕ್ರಿಯಾಯೋಜನೆ ಸಿದ್ದಪಡಿಸಿ ಅಭಿವೃದ್ದಿ ಕಾರ್ಯಕ್ಕೆ ಸಹಕರಿಸುವಂತೆ ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ತಹಸೀಲ್ದಾರ್‌ ವರದರಾಜುಗೆ ಒತ್ತಾಯಿಸಿದರು.

ಇದೇ ರೀತಿ ನಾಗಲಮಡಿಕೆ,ವೈ.ಎನ್.ಹೊಸಕೋಟೆ,ನಿಗಡಲ್‌ ಹಾಗೂ ಕಸಬಾ ಸೇರಿದಂತೆ ತಾಲೂಕಿನ 4 ಹೋಬಳಿಯಲ್ಲಿ ಹೆಚ್ಚು ಬಡವರ್ಗದವರಿದ್ದು ಜಮೀನು ಮಂಜೂರಾತಿ ಕೋರಿ ಬಗ‌ರ್ ಹುಕುಂನಲ್ಲಿ ಪಾರಂ ನಂ 50, 53 ಮತ್ತು 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಆದರೆ, ಇದುವರೆಗೂ ಅನೇಕ ಜನರಿಗೆ ಕಡುಬಡವರಿಗೆ ಬಗರು ಹುಕ್ಕುಂನಲ್ಲಿ ಜಮೀನುಗಳು ಮಂಜೂರು ಮಾಡಿ ಕೊಟ್ಟಿರುವುದಿಲ್ಲ. ಬಗ‌ರ್ ಹುಕ್ಕುಂ ಕಮಿಟಿ ಸಹ ಮಾಡದೇ ಇರುವುದರಿಂದ ಸಾರ್ವಜನಿಕ,ಸಣ್ಣ ಭೂ ಹಿಡುವಳಿದಾರರಿಗೆ ಅನ್ಯಾಯವಾಗಿರುತ್ತದೆ. ತಕ್ಷಣವೇ ಸಭೆ ಕರೆದು ಚರ್ಚಿಸಿ,ಬಗರ್ ಹುಕ್ಕಂನಲ್ಲಿ ಅರ್ಜಿ ಹಾಕಿರುವ ಭೂ ರಹಿತ ಕಡು ಬಡವರಿಗೆ ಜಮೀನು ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಶಿವು, ಜಿಲ್ಲಾ ಉಪಾಧ್ಯಕ್ಷ ಹನುಮಂತರಾಯಪ್ಪ,ಜಿಲ್ಲಾ ಕಾರ್ಯದರ್ಶಿ ದಂಡುಪಾಳ್ಯದ ರಾಮಾಂಜನೇಯ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡ್ಲಹಳ್ಳಿಯ ರಮೇಶ್, ರೈತ ಮುಖಂಡ ಚಿತ್ತಯ್ಯ, ಸದಾಶಿವಪ್ಪ,ರಾಮಾಂಜಿನಪ್ಪ, ಹನುಮಂತಪ್ಪ, ಹೊಸಕೋಟೆ ಗೋಪಾಲ್‌, ನಾರಾಯಣಪ್ಪ, ಗೋವಿಂದರಾಜು,ನರಸಿಂಹರಾಜು ಇತರರಿದ್ದರು.