ಸಾರಾಂಶ
ಹಗರಿಬೊಮ್ಮನಹಳ್ಳಿ: ಸರ್ಕಾರಿ ಗೋಮಾಳ ಭೂಮಿ ಸಾಗುವಳಿನಿರತ ರೈತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರೈತ ಮುಖಂಡರು, ಕೂಲಿಕಾರರು, ಮಹಿಳೆಯರು ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ರೈತ ಸಂಘದ ಜಿಲ್ಲಾ ಸಂಚಾಲಕ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರದ ಸೂಚನೆಯಂತೆ ಸರ್ಕಾರಿ ಭೂಮಿ ಸಾಗುವಳಿದಾರರು ಫಾರಂ ನಂ: ೫೭ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ೫ ವರ್ಷಗಳು ಗತಿಸಿದರೂ ಕೂಡ ಯಾವ ಸರ್ಕಾರಗಳು ರೈತರ ಅಳಲು ಆಲಿಸದೇ ನಿರ್ಲಕ್ಷಿಸಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅಕ್ರಮ ಸಕ್ರಮ ಸಮಿತಿ ರಚಿಸಿ ಅವುಗಳ ವಿಲೇವಾರಿಗೆ ಕ್ರಮ ವಹಿಸಿಲ್ಲ. ಭೂಮಿಯ ವಾಸ್ತವಿಕ ಸರ್ವೇ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಯಾಗ್ಲಾಟ್‌ನಲ್ಲಿ ಅರಣ್ಯ, ಕೊಂಡ, ಕೆರೆ ಮತ್ತಿತರೆ ಅಂಶಗಳಿವೆಯೆಂದು ಅರ್ಜಿಗಳನ್ನು ತಹಶೀಲ್ದಾರರು ತಿರಸ್ಕರಿಸುವುದು ಸಂಜಸವಲ್ಲ. ಈ ಹಿಂದಿನ ಸರ್ಕಾರ ಗೋಮಾಳ ಜಮೀನನ್ನು ಒಂದು ಬಾರಿ ಪರಿಗಣಿಸಿ ಹಕ್ಕುಪತ್ರ ನೀಡುವುದಾಗಿ ಸೂಚಿಸಿ ಮಾತಿನಂತೆ ನಡೆದುಕೊಂಡಿಲ್ಲ. ಈಗೀನ ಸರ್ಕಾರ ಕೂಡಲೇ ಫಾರಂ- ೫೭ ಸಲ್ಲಿಸಿ ತೊಂದರಿಗೊಳಗಾದ ಎಲ್ಲ ಬಡ ರೈತರಿಗೆ ನ್ಯಾಯ ಒದಗಿಸಿಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಂ.ಆನಂದ, ಎಲ್.ಟೀಕ್ಯನಾಯ್ಕ, ದುರುಗಪ್ಪ, ಮೈಲಪ್ಪ, ಚಾಂದ್‌ಬೀ, ಅಂಜಿನಮ್ಮ, ಲೋಕ್ಯಾನಾಯ್ಕ, ಹುಸೇನ್‌ಪೀರ್ ಇತರರಿದ್ದರು.ಹಗರಿಬೊಮ್ಮನಹಳ್ಳಿ ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಮುಂಭಾಗ ರೈತ ಸಂಘದ ಪದಾಧಿಕಾರಿಗಳು ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.