ಹುಚ್ಚುರಾಯಸ್ವಾಮಿ ದೇವಸ್ಥಾನಲ್ಲಿ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಲು ಆಗ್ರಹ

| Published : Oct 09 2024, 01:30 AM IST

ಸಾರಾಂಶ

ಶಿಕಾರಿಪುರದ ಇತಿಹಾಸ ಪ್ರಸಿದ್ಧ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಕರ್ನಾಟಕ ಜನಜಾಗೃತ ವೇದಿಕೆ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಬಾಗ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಇಲ್ಲಿನ ಇತಿಹಾಸ ಪ್ರಸಿದ್ದ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವ ಜೊತೆಗೆ ಭಕ್ತಾಧಿಗಳ ಅನುಕೂಲಕ್ಕಾಗಿ ಶೌಚಾಲಯ ಹಾಗೂ ಮತ್ತಿತರ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಸಲ್ಲಿಸಿದ ಮನವಿ ಬಗ್ಗೆ ತಾಲೂಕು ಆಡಳಿತ ನಿರ್ಲಕ್ಷಿಸಿದ್ದು ಇದರಿಂದ ಬಹು ಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ಬೇವೂರು ಮಾತನಾಡಿ, ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ಸ್ವಾಮಿ ದರ್ಶನ ಮೂಲಕ ಪುನೀತರಾಗುತ್ತಿದ್ದು, ಆಗಮಿಸುವ ಭಕ್ತರಿಗಾಗಿ ಕನಿಷ್ಠ ಮೂಲಭೂತ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.

ಶೌಚಾಲಯ ಸಮಸ್ಯೆ ಮಹಿಳೆಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಜಡಿದು ಹಲವು ವರ್ಷಗಳಾಗಿದೆ. ದೇವಸ್ಥಾನದಲ್ಲಿನ ಆದಾಯ ಭಕ್ತರ ಅನುಕೂಲಕ್ಕೆ ವಿನಿಯೋಗವಾಗಬೇಕು ಹೊರತು ಅನ್ಯ ಧರ್ಮೀಯರ ಅಭಿವೃದ್ಧಿಗಾಗಿ ಮೀಸಲಾಗಬಾರದು, ಈ ಕುರಿತು ಹಲವು ಬಾರಿ ತಹಸೀಲ್ದಾರ್ ಸೇರದಂತೆ ಹಿರಿಯ ಅಧಿಕಾರಿಗಳು, ಸರ್ಕಾರದ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ದೂರಿದರು.

ದೇವಸ್ಥಾನ, ಮಠ ಮಂದಿರಗಳು ಶ್ರದ್ಧಾ ಕೇಂದ್ರವಾಗಿದ್ದು, ಭಗವಂತನ ಸನ್ನಿಧಾನದಲ್ಲಿ ಶಾಂತಿ ನೆಮ್ಮದಿ ಹುಡುಕಿ ಬರುವ ಭಕ್ತಾಧಿಗಳ ಧಾರ್ಮಿಕ ಭಾವನೆಯನ್ನು ಕೆಣಕುವ ಫ್ಯಾಷನ್ ಷೋ ವೇದಿಕೆಯಾಗಬಾರದು, ಈ ದಿಸೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಪುರುಷರಿಗೆ ಪಂಚೆ, ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ಜತೆಗೆ ಗರ್ಭ ಗುಡಿಗೆ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಈಗಾಗಲೇ ಆದೇಶಿಸಲಾಗಿದ್ದು, ಕಾನೂನು ಪಾಲಿಸಬೇಕಾದ ಜನಪ್ರತಿನಿಧಿಗಳು, ಮುಖಂಡರೇ ಪಾಲಿಸುತ್ತಿಲ್ಲ. ಈ ಬಗ್ಗೆ ದೃಢ ನಿರ್ದಾರ ಕೈಗೊಳ್ಳಬೇಕಾದ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ದೇವಸ್ಥಾನ ಸಮೀಪದ ಮುಖ್ಯ ರಸ್ತೆಯಲ್ಲಿ ನಿತ್ಯ ಬೃಹತ್ ಗಾತ್ರದ ಲಾರಿ, ಬಸ್ ಮತ್ತಿತರ ವಾಹನಗಳು ಬೇಕಾಬಿಟ್ಟಿಯಾಗಿ ಚಲಿಸಿ ಗೋಪುರದಲ್ಲಿ ಬಿರುಕು ಮೂಡುತ್ತಿದೆ, ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು, ವಾಯುವಿಹಾರಿಗಳು, ಸಮೀಪದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಎಲ್ಲ ಸಮಸ್ಯೆ ಕುರಿತು ಹಲವು ಬಾರಿ ತಾಲೂಕು ಆಡಳಿತ ಹಾಗೂ ಸರ್ಕಾರಕ್ಕೆ ಸಲ್ಲಿಸಿದ ಮನವಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಆಗಮಿಸಿ ಸೂಕ್ತ ಕ್ರಮದ ಬಗ್ಗೆ ಬರವಸೆ ನೀಡುವವರೆಗೂ ಆಹೋರಾತ್ರಿ ಧರಣಿ ಮುಂದುವರಿಸುವುದಾಗಿ ಸುರೇಶ್ ತಿಳಿಸಿದರು.

ಈ ವೇಳೆ ಮುಖಂಡ ಪಿ.ಎನ್ ವಿಶ್ವನಾಥ್, ಬೆಂಕಿ ಯೋಗೀಶ, ವಾಸುದೇವಾಚಾರ್, ಶ್ರೀಧರ, ಜಗದೀಶ್ ಅಂಗಡಿ, ಸಾಲೂರು ಕುಮಾರ್, ದೊಡ್ಡಯ್ಯ ಮತ್ತಿತರರು ಹಾಜರಿದ್ದರು.