ಬಿಸಿಊಟ ತಯಾರಕರ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹ

| Published : Oct 27 2024, 02:35 AM IST

ಸಾರಾಂಶ

ಬೆಂಗಳೂರಿನಲ್ಲಿ ಎಐಟಿಯುಸಿ ಬಿಸಿ ಊಟ ತಯಾರಕರ ಸಂಘಟನೆಯಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರಿನ ಸಮಗ್ರ ಶಿಕ್ಷಣ ಯೋಜನಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಎಐಟಿಯುಸಿ ಬಿಸಿಯೂಟ ತಯಾರಕರ ಮತ್ತು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಾಯಿತು.

ಸಭೆಯಲ್ಲಿ ಬಿಸಿಯೂಟ ತಯಾರಕರ ವಿವಿಧ ಸಮಸ್ಯೆಗಳಾದ ಏಪ್ರಿಲ್, ಮೇ ತಿಂಗಳ ಬೇಸಿಗೆ ಕಾರ್ಯಕ್ರಮದಲ್ಲಿ ಅಡುಗೆ ಮಾಡಿದ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಾಕಿ ಇರುವ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು, ಮರಣ ಪರಿಹಾರ ಜಾರಿಗೊಳಿಸಬೇಕು, ನಿವೃತ್ತ ಬಿಸಿಊಟ ತಯಾರಕರಿಗೆ ಘೋಷಣೆಯಾಗಿರುವ ಇಡುಗಂಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, 10 ರಿಂದ 20 ವರ್ಷ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಬಿಡುಗಡೆಗೊಳಿಸಿದ ಬಿಸಿಯೂಟ ತಯಾರಕರಿಗೂ ಇಡುಗಂಟು ಹಣ ಕೊಡಬೇಕು ಎಂದು ಒತ್ತಾಯಿಸಲಾಯಿತು.

ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು, ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆ ರದ್ದುಗೊಳಿಸಿ ಮುಖ್ಯ ಶಿಕ್ಷಕರು ಮತ್ತು ಅಡುಗೆಯವರ ಬ್ಯಾಂಕ್ ಜಂಟಿ ಖಾತೆ ಪುನಃ ಮುಂದುವರಿಸಬೇಕು ಎಂದು ಅಗ್ರಹಿಸಲಾಯಿತು.

ಈ ಹಿಂದೆ ವಾರಕ್ಕೆ 2ದಿನ ಮೊಟ್ಟೆ ಕೊಡುಲಾಗುತ್ತಿತ್ತು, ಈಗ ವಾರದಲ್ಲಿ 6 ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಆದ್ದರಿಂದ ಮೊಟ್ಟೆ ಸುಲಿಯುವುದಕ್ಕೆ ಇರುವ 30 ಪೈಸೆ ಬದಲಾಗಿ 50 ಪೈಸೆ ನೀಡಬೇಕು, ಈಗ ಶಾಲೆಯಲ್ಲಿ ಹೆಚ್ಚುವರಿ ಕೆಲಸ ಇರುವುದರಿಂದ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡಬೇಕು ಎಂದು ಒತ್ತಾಯಿಸಲಾಯಿತು.

ಬೇಡಿಕೆಗಳನ್ನು ಆಲಿಸಿ ಸಚಿವ ಮಧು ಬಂಗಾರಪ್ಪ ಅವರು, ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿ ವೇತನ ಹೆಚ್ಚುವರಿ ಮಾಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಎಲ್ಲ ಸಮಸ್ಯೆಗಳನ್ನು ಕೂಲಂಕುಶವಾಗಿ ಚರ್ಚಿಸಿ ಹಂತ ಹಂತವಾಗಿ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸು ಭರವಸೆ ನೀಡಿದ ಅವರು, ಬಾಕಿ ಇದ್ದ ಮೂರು ತಿಂಗಳ ವೇತನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದರು.

ಸಭೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇ ನ್ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಮುಖಂಡರಾದ ನಿರ್ಮಲ, ಶಶಿಕಲ ಹಾಗೂ ಶಿಕ್ಷಣ ಇಲಾಖೆ ಪ್ರಿನ್ಸಿಪಲ್ ಸೆಕ್ರೆಟರಿ ರಿತೇಶ್ ಕುಮಾರ್, ಶಿಕ್ಷಣ ಇಲಾಖೆ ಕಮಿಷನರ್ ತ್ರಿಲೋಕ ಚಂದ್ರ, ಮಧ್ಯಾಹ್ನ ಉಪಹಾರ ಯೋಜನೆ, ನಿರ್ದೇಶಕ ಕುಮಾರ ರಾವ್, ಮಂಜುನಾಥ್ ಸೇರಿ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.