ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಖಾಸಗಿ ಕಾಲೇಜ್‌ನಲ್ಲಿ ನಡೆಸುತ್ತಿರುವುದನ್ನು ವಿರೋಧಿಸಿ ಹಾಗೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ನಡೆಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಎದುರು ಕ್ಯಾಂಪಸ್ ವಿದ್ಯಾರ್ಥಿಗಳು ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಹಾವೇರಿ ಜಿಲ್ಲೆಯು ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಗಿ 27 ವರ್ಷಗಳನ್ನು ಪೂರೈಸಿದೆ. ಶಿಕ್ಷಣದ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ಸರ್ಕಾರಿ ವಿಶ್ವವಿದ್ಯಾಲಯ ಆರಂಭಿಸಲಾಗಿದ್ದು, ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆಸಬೇಕೆಂದು ವಿದ್ಯಾರ್ಥಿ ಸಮುದಾಯದ ಪರವಾಗಿ, ವಿವಿಧ ಸಂಘ ಸಂಸ್ಥೆಗಳ, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು, ಹಾವೇರಿ ಜಿಲ್ಲೆಯ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು. ವಿವಿ ಕ್ಯಾಂಪಸ್‌ನಲ್ಲಿ ಘಟಿಕೋತ್ಸವವನ್ನು ನಡೆಸಿದರೆ ರಾಜ್ಯಪಾಲರಿಗೆ ಜನಪ್ರತಿನಿಧಿಗಳಿಗೆ ಗೊತ್ತಾಗುತ್ತದೆ. ವಿವಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡಬೇಕೆಂದು ಎಚ್ಚರಿಕೆ ಪಾಠವಾಗುತ್ತದೆ. ರಸ್ತೆ, ಬಸ್ ನಿಲ್ದಾಣ, ಬಸ್ಸಿನ ಸಮಸ್ಯೆಗಳಿಗೆ ಪರಿಹಾರ, ಕುಡಿಯುವ ನೀರು, ಹಾಸ್ಟೆಲ್ ಸೌಲಭ್ಯ, ಆಟದ ಮೈದಾನ, ಕಾಯಂ ಉಪನ್ಯಾಸಕರು, ಸಿಬ್ಬಂದಿ ಕೊರತೆ ಎಲ್ಲಾ ಸರ್ಕಾರದ ಗಮನಾರ್ಹವಾಗುತ್ತದೆ. ಆದ್ದರಿಂದ ವಿವಿ ಆವರಣದಲ್ಲಿಯೇ ಘಟಿಕೋತ್ಸವವನ್ನು ನಡೆಸಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣಕುಮಾರ್ ನಾಗವತ್ ಮಾತನಾಡಿ, ಯಾವುದೇ ಕಾರಣಕ್ಕೂ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಕ್ಯಾಂಪಸ್‌ನಲ್ಲಿ ಬಿಟ್ಟು ಬೇರೆಡೆಗೆ ನಡೆಸಲು ಆಲೋಚನೆ, ಯೋಜನೆ, ತೀರ್ಮಾನವನ್ನು ಕೈಗೊಳ್ಳಬಾರದು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾಲೇಜ್ ಘಟಕದ ಅಧ್ಯಕ್ಷೆ ಚೈತ್ರ ಕೊರವರ, ಮುಖಂಡರಾದ ಪ್ರಿಯಾ ದೇವಗಿರಿ, ಸಿಂಧೂ ಸಿ., ಈಶ್ವರಿ ಓಲೇಕಾರ, ನಿವೇದಿತಾ ಜಿ, ಸಿಮನಾನ್ ಐ.ಜಿ, ಯಶೋಧಾ ಎಲ್., ಚೆನ್ನಮ್ಮ ಸಿ.ಎಂ, ಗಿರಿಜಾ ಡಿ., ದ್ಯಾಮವ್ವ ಜಿ.ಎಸ್, ಪವಿತ್ರಾ ಕೆ., ಶಿವರಾಜ ಲಮಾಣಿ, ಶಂಭು, ನಾಗರಾಜ ಕೆ.ಆರ್, ನವೀನ ಡಿ.ಆರ್, ಕಿರಣ, ಪ್ರವೀಣ್ ಎಂ., ಶರಣು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.