ರಾಣಿಬೆನ್ನೂರಿನ ನೇಕಾರ ಕಾಲನಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

| Published : Aug 01 2025, 12:30 AM IST

ಸಾರಾಂಶ

ನೇಕಾರ ನಗರದಲ್ಲಿ ಕಾಂಕ್ರಿಟ್‌ ರಸ್ತೆ, ಕಾಲುವೆ, ಸರ್ಕಲ್ಲಿಗೆ ಹೈಮಾಸ್ಟ್‌ ಬೀದಿ ದೀಪ, ಪಾರ್ಕ್‌ ನವೀಕರಣ ಮುಂತಾದ ಸಮಸ್ಯೆಗಳು ಬಹಳ ವರ್ಷಗಳಿಂದ ಆಗದೇ ಹಾಗೇ ಉಳಿದಿದೆ.

ರಾಣಿಬೆನ್ನೂರು: ನಗರದ 6ನೇ ವಾರ್ಡ್‌ನ ನೇಕಾರ ಕಾಲನಿಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ತಾಲೂಕು ಕೈಮಗ್ಗ ನೇಕಾರ ಕಾರ್ಮಿಕರ ಸಮನ್ವಯ ಸಮಿತಿಯ ಸದಸ್ಯರು ಗುರುವಾರ ಪೌರಾಯುಕ್ತ ಫಕ್ಕಿರಪ್ಪ ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.ನೇಕಾರ ನಗರದಲ್ಲಿ ಕಾಂಕ್ರಿಟ್‌ ರಸ್ತೆ, ಕಾಲುವೆ, ಸರ್ಕಲ್ಲಿಗೆ ಹೈಮಾಸ್ಟ್‌ ಬೀದಿ ದೀಪ, ಪಾರ್ಕ್‌ ನವೀಕರಣ ಮುಂತಾದ ಸಮಸ್ಯೆಗಳು ಬಹಳ ವರ್ಷಗಳಿಂದ ಆಗದೇ ಹಾಗೇ ಉಳಿದಿದೆ. ಇಲ್ಲಿನ ನಗರಸಭಾ ಸದಸ್ಯರು ಒಮ್ಮೆಯೂ ಕಾಲನಿಗೆ ಮುಖ ಹಾಕಿರುವುದಿಲ್ಲ. ಜನರು ಅವರ ಮುಖ ಕೂಡ ನೋಡಿಲ್ಲ. ಸಮಸ್ಯೆಗಳ ಬಗ್ಗೆ ಫೋನ್ ಮಾಡಿದರೂ ಸ್ಪಂದಿಸುವುದಿಲ್ಲ. ಹೀಗಾಗಿ ನಗರವು ಸಮಸ್ಯೆಗಳ ಆಗರವಾಗಿದೆ.

ಹೊಸದಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷರನ್ನು ಭೇಟಿಯಾಗಿ ಕುಂದುಕೊರತೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವು. ನಮ್ಮ ಕಾಲನಿಗೆ ಬಂದು ಪರಿಶೀಲಿಸಿ ಇಲ್ಲಿ ಸಮಸ್ಯೆ ಬಹಳವಿದೆ, ಕೆಲಸ ಮಾಡಿಸಲು ಹೆಚ್ಚಿನ ಅನುದಾನ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಾವು ಕೂಡ ನಮ್ಮ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರದ ಮೂಲಕ ಅವರಲ್ಲಿ ಸ್ಥಳೀಯ ಶಾಸಕರ ಅನುದಾನದಲ್ಲಿ ಅಗತ್ಯ ಹಣಕಾಸು ಮಂಜೂರು ಮಾಡಿ ನಮ್ಮ ಕಾಲನಿಯ ಸಮಸ್ಯೆಗಳನ್ನು ಪರಿಹರಿಸಿ ಎಂದು ಒತ್ತಾಯಿಸಿದ್ದೆವು. ಅದಕ್ಕೆ ಅವರು ಒಪ್ಪಿ ನಗರಸಭೆಯವರೊಂದಿಗೆ ಮಾತನಾಡಿ ಕೆಲಸ ಮಾಡಿಸೋಣ ಎಂದು ಹೇಳಿದರು. ಆದರೆ ಇಲ್ಲಿಯವರೆಗೂ ಯಾವುದೇ ಕೆಲಸದ ಅಭಿವೃದ್ಧಿಯಾಗಿಲ್ಲ ಎಂದರು.ಅಧ್ಯಕ್ಷ ಗೋವಿಂದಪ್ಪ ಬೈರವರ, ಉಪಾಧ್ಯಕ್ಷ ತಿಪ್ಪೇಶಪ್ಪ ಚುಂಚಾನವರ, ಕಾರ್ಯದರ್ಶಿ ಫಕ್ಕೀರಪ್ಪ ವಿಭೂತಿ, ಹನುಮಂತಪ್ಪ ಬ್ಯಾಡಗಿ, ವೀರಣ್ಣ ಕುದರಿ, ರವಿ ಹೊಸಪೇಟೆ, ಯಮನಪ್ಪ ಹೊಸಪೇಟೆ, ಪಾರವ್ವ ಹೊಸಪೇಟೆ, ಪ್ರಕಾಶ ಅಂಗಡಿ, ಮಂಜುನಾಥ ನಿಂಗಪ್ಪನವರ, ಗಂಗಮ್ಮ ಬೆಟಗೇರಿ, ಸತೀಶ ಸಿಗಾರಿ, ಹನುಮಕ್ಕ ಐರಣಿ, ಕಿರಣ ಅಮಾಸಿ, ಶಕುಂತಲಾ ಗೊಂದಕರ, ಮಹದೇವಪ್ಪ ಬೆನಕನಗೊಂಡ, ಫಕ್ಕೀರಪ್ಪ, ವೀರಣ್ಣ ಕುದರಿ ಸೇರಿದಂತೆ ಇತರರಿದ್ದರು.