ಸಾರಾಂಶ
ರಾಣಿಬೆನ್ನೂರು: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶೌಚಾಲಯ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಉಪ ತಹಸೀಲ್ದಾರ ಎಸ್.ಟಿ. ದೊಡ್ಮನಿ ಮೂಲಕ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದರು. ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದರೂ ಸ್ವಚ್ಛತೆ ಮಾಯವಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ದುರ್ವಾಸನೆ ಬೀರುತ್ತಿರುವ ಶೌಚಾಲಯ, ಕಸದಿಂದ ಆವರಿಸಿರುವ ಕಚೇರಿ, ಕೊಠಡಿಯ ಅಕ್ಕಪಕ್ಕದಲ್ಲೇ ಗಿಡ ಗಂಟೆಗಳು ಬೆಳೆದು ಗಬ್ಬೆದ್ದು ನಾರುತ್ತಿವೆ. ನೀರಿನ ಸಂಪರ್ಕವೇ ಇಲ್ಲದ ಶೌಚಾಲಯ, ಸೊಳ್ಳೆಗಳ ಕಾಟ, ಸುರಕ್ಷತೆ ಇಲ್ಲದ ಕಿಟಕಿಯ ಬಾಗಿಲುಗಳು ಮಳೆಯಿಂದ ಸೋರುತ್ತಿರುವ ಆಡಳಿತ ಸೌಧ, ಎಲೆ, ಅಡಿಕೆ, ತಂಬಾಕು ಸಿಗರೇಟ್, ಬೀಡಿ ಸೇವನೆ ಗುಟ್ಕಾ ಜಗಿದು ಉಗುಳುತ್ತಿರುವುದು ಕಂಡರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ನಿರ್ಲಿಪ್ತರಾಗಿದ್ದಾರೆ. ಪ್ರತಿದಿನವೂ ವಿವಿಧ ಕೆಲಸಗಳಿಗಾಗಿ ನೂರಾರು ಜನರು ಬಂದು ಹೋಗುವ ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿದ್ದು ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಆದರಿಂದ ಕೂಡಲೇ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದೆ ಹೋದರೆ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ಎದುರುಗಡೆ ಸಂಘಟನೆ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಿತ್ಯಾನಂದ ಕುಂದಾಪುರ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ, ಸಿದ್ಧಾರೂಢ ಗುರುಂ. ಕೊಟ್ರೇಶಪ್ಪ ಎಮ್ಮಿ, ಗೋಪಿ ಕುಂದಾಪುರ, ಹನುಮಂತಪ್ಪ ಕಬ್ಬಾರ, ಭೀಮಣ್ಣ ಅರಳಿಕಟ್ಟಿ, ಎಲ್ಲಪ್ಪ ಚಿಕ್ಕಣ್ಣನವರ ಮತ್ತಿತರರು ಉಪಸ್ಥಿತರಿದ್ದರು.