ತೋಟಗಾರಿಗೆ ಬೆಳೆ ಹಾನಿಗೆ ಪರಿಹಾರ ಒದಗಿಸಲು ಆಗ್ರಹ

| Published : Apr 02 2024, 01:05 AM IST

ತೋಟಗಾರಿಗೆ ಬೆಳೆ ಹಾನಿಗೆ ಪರಿಹಾರ ಒದಗಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಕಾಲಿಕ ಆಲಿಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದ ಜಿಲ್ಲೆಯ ಹಲವೆಡೆ ತೋಟಗಾರಿಕೆ ಬೆಳೆ ಹಾನಿಗೊಂಡಿದ್ದು, ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಶನಿವಾರ ಸಂಜೆ ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದ ಜಿಲ್ಲೆಯ ಹಲವೆಡೆ ಲಿಂಬೆ, ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜೊತೆಗೆ ಸಿಡಿಲು ಬಡಿದು ಎತ್ತು, ಕುರಿ, ಕೋಳಿ ಸಾವಿಗೀಡಾದ ಅಪಾರ ನಷ್ಟ ಉಂಟಾಗಿದೆ. ಹಾನಿಗೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಶನಿವಾರ ರಾತ್ರಿ ಜಿಲ್ಲೆಯ ಹಲವು ಕಡೆ ಅಕಾಲಿಕ ಆಲಿಕಲ್ಲು ಮಳೆ ಹಾಗೂ ಭಾರೀ ಗಾಳಿಯಿಂದಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ, ಸಮೀಪದ ಜಂಬಗಿ (ಆಹೇರಿ), ಮಾದಾಳ ವಸ್ತಿ ಗ್ರಾಮಗಳ ಸುಮಾರು 40 ರಿಂದ 50 ರೈತರ ಜಮೀನಿನಲ್ಲಿನ ಲಿಂಬೆ ಗಿಡಗಳು ಗಾಳಿಗೆ ನೆಲಕ್ಕುರುಳಿ ಎಲ್ಲಾ ಮಿಡಿ, ಕಾಯಿ, ಹೂಗಳು ನೆಲಕಚ್ಚಿವೆ. ಲಿಂಬೆ ಹಣ್ಣಿಗೆ ಈಗ ಚಿನ್ನದ ಬೆಲೆ ಇದೆ. ಬರಗಾಲದಿಂದ ನೀರಿಲ್ಲದ ವೇಳೆ ಇರುವ ಅಲ್ಪಸ್ವಲ್ಪ ನೀರಿನಲ್ಲಿ ಹಾಗೂ ಟ್ಯಾಂಕರ್ ನೀರು ಹಾಕಿ ಬೆಳೆಸಿದ ಲಿಂಬೆ ಗಿಡಗಳು ನಾಶವಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಾಳಿಂಬೆ, ಚಿಕ್ಕು, ಮಾವು, ತೆಂಗು, ಸೇರಿದಂತೆ ಇನ್ನಿತರ ಹಣ್ಣಿನ ಗಿಡಗಳು ನೆಲಕಚ್ಚಿ ನಷ್ಟ ಉಂಟಾಗಿದ್ದು, ಮೇವಿನ ಬಣವಿ ಹಾಗೂ ಹಲವಾರು ಮನೆಗಳ ಪತ್ರಾಸ್‌, ಮನೆಗಳು ಹಾನಿಗೊಂಡಿವೆ.

ಬೊಮ್ಮನಹಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಅವರ 1 ಸಾವಿರ ಬಾಳೆ ಗಿಡ ನೆಲಕ್ಕುರುಳಿವೆ. ನಾಗಠಾಣ ಗ್ರಾಮದ ಅರವಿಂದ ಗುಣಕಿ, ರಾಜಕುಮಾರ ಗುಣಕಿ, ಗಂಗಾಧರ ಗುಣಕಿ, ಆಕಾಶ ಗುಣಕಿ ಅವರ 8 ಕ್ಯಾಂಟರ್ ನಷ್ಟು ಒಣಮೇವು, 5 ಚೀಲ ಗೋಧಿ, ಪೈಪ್‌ಗಳು ಸೇರಿ ಅಪಾರ ನಷ್ಟ ಉಂಟಾಗಿದೆ. ಗುಣಕಿ ಗ್ರಾಮದಲ್ಲಿ ಸಿಡಿಲಿಗೆ 2 ಎತ್ತು, 1 ಕುರಿ, ಕೋಳಿಗಳು ಮೃತಪಟ್ಟಿವೆ. ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ ಹಾಗೂ ಗಾಳಿಯಿಂದಾಗಿ ಸಾಕಷ್ಟು ಪ್ರಮಾಣದ ನಷ್ಟ ಉಂಟಾಗಿದೆ. ಸಂಬಂಧಿಸಿದ ತಹಸೀಲ್ದಾರಗಳು, ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳಿಂದ ವಿಸ್ತ್ರತ ಸಮೀಕ್ಷಾ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಬೇಕು. ನಷ್ಟಕ್ಕೆ ಗುರಿಯಾದ ಪ್ರತಿಯೊಬ್ಬ ರೈತರಿಗೆ ಎಕರೆಗೆ ಸುಮಾರು ₹ 5 ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಜಿಲ್ಲಾದ್ಯಂತ ಸಮೀಕ್ಷೆ ಮಾಡಿ ತುರ್ತು ವಿಪತ್ತು ಪರಿಹಾರ ನಿಧಿಯಡಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಯಿತು. ಒಂದು ವೇಳೆ ವಿಳಂಬನೀತಿ ಅನುಸಿರಿಸಿದರೆ ಜಿಲ್ಲೆಯ ರೈತರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಅರುಣಗೌಡ ತೇರದಾಳ, ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ),

ತಾಲೂಕು ಉಪಾಧ್ಯಕ್ಷ ಪ್ರಕಾಶ ತೇಲಿ, ಜಿಲ್ಲಾ ಸಂಚಾಲಕ ಮಹಾಂತೇಶ ಮಮದಾಪುರ, ಸದಸ್ಯ ಮಲ್ಲಿಕಾರ್ಜುನ ಮಹಾಂತಮಠ, ತಾಲೂಕು ಯುವ ಘಟಕದ ಅಧ್ಯಕ್ಷ ಪ್ರಭು ಕಾರಜೋಳ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಹಾಜಿಲಾಲ ಖರ್ಜಗಿ, ಅಫಜಲಪುರ ಟಕ್ಕೆ, ಸಂತೋಷ ಮುಡಗಿ, ಗಣೇಶ ತಗಡೆ, ಪ್ರಕಾಶ ಹತ್ತಳ್ಳಿ, ಸಾಹೇಬಣ್ಣ ಕೆರೂರ, ಸಿದ್ದಪ್ಪ ಕೆರೂರ, ಸತೀಶ ಕೆರೂರ, ಓಗೆಪ್ಪ ಬಿರಾದಾರ, ಸೋಮನಾಥ ನಂದಿಕೋಲ, ಶ್ರೀಶೈಲ ಪೂಜಾರಿ, ಅರವಿಂದ ಗುಣಕಿ, ಸಂಗಪ್ಪ ಕೋಣಸಿರಸಗಿ, ರಾಜಕುಮಾರ ಗುಣಕಿ, ಸೇರಿದಂತೆ ಜಂಬಗಿ, ಆಹೇರಿ, ನಾಗಠಾಣ, ದ್ಯಾಬ್ಯಾರಿ ಗ್ರಾಮದ ಉಪಸ್ಥಿತರಿದ್ದರು.