ಕೊಳ್ಳೇಗಾಲ: ಕತ್ತಲಲ್ಲೇ ಇರುವ ಪಾಲಾರ್ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಲು ಆಗ್ರಹ

| Published : Apr 02 2024, 01:09 AM IST / Updated: Apr 02 2024, 08:49 AM IST

ಕೊಳ್ಳೇಗಾಲ: ಕತ್ತಲಲ್ಲೇ ಇರುವ ಪಾಲಾರ್ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿ ಪ್ರದೇಶವಾದ ಪಾಲರ್ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿ ಪಡಿಸುತ್ತಿರುವ ಅರಣ್ಯಾಧಿಕಾರಿಗಳ ಧೋರಣೆಯನ್ನು ಖಂಡಿಸಿ ಪಾಲಾರ್ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

   ಕೊಳ್ಳೇಗಾಲ :  ಗಡಿ ಪ್ರದೇಶವಾದ ಪಾಲರ್ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿ ಪಡಿಸುತ್ತಿರುವ ಅರಣ್ಯಾಧಿಕಾರಿಗಳ ಧೋರಣೆಯನ್ನು ಖಂಡಿಸಿ ಪಾಲಾರ್ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. 

ಡಿಎಫ್ಓ ಕಚೇರಿಯ ಮುಂಭಾಗದಲ್ಲಿ ಪಾಲಾರ್ ಹಾಡಿಯಿಂದ ಆಗಮಿಸಿದ್ದ ಸುಮಾರು 50ಕ್ಕಿಂತ ಹೆಚ್ಚು ಗಿರಿಜನರು ಅರಣ್ಯಾಧಿಕಾರಿಗಳ ವರ್ತನೆಗೆ ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರಣ್ಯವಾಸಿ ಸೇವಾ ಟ್ರಸ್ಟ್ ಕಾರ್ಯಧ್ಯಕ್ಷ ನಾಗೇಂದ್ರ ಮಾತನಾಡಿ, ನಮ್ಮ ಪಾಲಾರ್ ಹಾಡಿ ಮುಖ್ಯ ರಸ್ತೆಯಲ್ಲಿಯೇ ಇದೆ. ಇಲ್ಲಿ ವಿದ್ಯುತ್ ಕಲ್ಪಿಸಲು ಅರಣ್ಯ ಇಲಾಖೆ ನಮಗೆ ಅನೇಕ ರೀತಿಯಲ್ಲಿ ತೊಡಕುಂಟು ಮಾಡುತ್ತಿದೆ. ಇದು ಖಂಡನೀಯ, ಎಷ್ಟೇ ಬಾರಿ ಮನವಿ ಮಾಡಿದರೂ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ನಾವೆಲ್ಲರೂ ಕತ್ತಲೆಯಲ್ಲೆ ಕಾಲ ಕಳೆದದ್ದೂ ಸಾಕಾಗಿ ಹೋಗಿದೆ. ನಮಗೆ ಕೂಡಲೆ ವಿದ್ಯುತ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿದರು. 

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಡಿಎಫ್ಓ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಹನೂರು ತಹಸೀಲ್ದಾರ್ ಗುರುಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ನವೀನ್ ಮಠದ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಚೆಸ್ಕಾಂ ಇಇ ತಬಸುಮ್ಮ, ಎಇಇ ಶಂಕರ್ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚಚಿ೯ಸಿ ಒಟ್ಟಾರೆ 40 ದಿನಗೊಳಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ಸಮಸ್ಯೆ ಬಗೆಹರಿಸುವ ಜೊತೆಗೆ ನಿಮ್ಮ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂಬ ಮನವಿ ಹಿನ್ನೆಲೆ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟ ಉಪಾಧ್ಯಕ್ಷೆ ಕೆಂಪಾರೆ, ಮಹದೇವ, ಚಿನ್ನಪ್ಪಿ, ಸತ್ಯಮಂಗಲ ಗಿರೀಶ್, ಮಾಸ್ತಮ್ಮ, ಗಂಗೆ, ಮಾದಿ, ಮಾದೇವಿ, ದುಂಡಮ್ಮ ಇನ್ನಿತರರಿದ್ದರು.

ಕೊಣನಕೆರೆ ಗಿರಿಜನ ಹಾಡಿ ಮುಖ್ಯ ರಸ್ತೆಯು ಅರಣ್ಯದಾಚೆ ಇರುವುದರಿಂದ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ನಿಮಗೂ ಸಹಾ ವಿದ್ಯುತ್ ಕಲ್ಪಿಸಲು ಅನೇಕ ತೊಡಕುಗಳಿವೆ. ನೀವು ಸತ್ಯಾಗ್ರಹ ನಡೆಸುತ್ತಿರುವುದರಿಂದ ಜಿಲ್ಲಾಡಳಿತ ನಿಮ್ಮ ಪರವಿದೆ. ಅನೇಕ ತೊಡಕುಗಳು ಶೀಘ್ರ ಸರಿಯಾಗಲಿದೆ. ಡಿಎಫ್ಓ ಸಂತೋಷ್ ಕುಮಾರ್ ಅವರು ಸಹಾ ಸ್ಪಂದಿಸಿದ್ದಾರೆ. ಈ ಹಿನ್ನೆಲೆ ಪ್ರತಿಭಟನೆ ಕೈಬಿಡಿ, ಜಿಲ್ಲಾಧಿಕಾರಿಗಳು ಈ ವಿಚಾರವಾಗಿ 6 ಸಭೆ ನಡೆಸಿ ಕ್ರಮವಹಿಸಿದ್ದಾರೆ.

 - ಮಂಜುಳ, ಜಿಲ್ಲಾ ಗಿರಿಜನ ವಿಸ್ತರಣಾಧಿಕಾರಿ 

50 ಮೀಟರ್‌ನಲ್ಲಿ ಕರೆಂಟ್ ಕಂಬ ನಮ್ಮ ಹಾಡಿಯಿಂದ ಹಾದು ಹೋಗಿದೆ. ಈ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅವರ ಅಧ್ಯಯನಕ್ಕೂ ತೊಂದರೆಯಾಗಿದೆ. ಚೆಸ್ಕಾಂನವರು ಈಗಗಾಲೇ ವಿದ್ಯುತ್ ಕಲ್ಪಿಸಲು ಕಂಬ, ಸಲಕರಣೆ ತಂದು ಹಾಕಿದ್ದಾರೆ. ಆದರೆ ಕಾಮಗಾರಿಗೆ ಅರಣ್ಯಾಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಇದು ಯಾವ ನ್ಯಾಯ, ಅರಣ್ಯ ಇಲಾಖೆ ನಮ್ಮ ಮಕ್ಕಳ ಅದ್ಯಯನಕ್ಕೂ ಕರೆಂಟ್ ನೀಡದೆ ದ್ರೋಹ ಮಾಡುತ್ತಿದೆ. ಇನ್ನಾದರೂ ಇಲಾಖೆ ಸ್ಪಂದಿಸಿ ನಮ್ಮ ನೋವಿಗೆ ಧ್ವನಿಯಾಗಲಿ. 

- ನಾಗೇಂದ್ರ, ಅರಣ್ಯವಾಸಿ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ 

ನಿಮ್ಮ ಗ್ರಾಮಕ್ಕೆ ವಿದ್ಯುತ್ ನೀಡುವ ಸಲುವಾಗಿ ಅನೇಕ ತೊಡಕುಗಳಿವೆ. ಅರ್ಜಿ ಸಲ್ಲಿಸುವ ಹಿನ್ನೆಲೆ ಈ ಸಂಬಂಧ ಚೆಸ್ಕಾಂ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಅರ್ಜಿ ಹಾಕುವ ವಿಧಾನ ತಿಳಿಸುವೆ. ಅರ್ಜಿ ಹಾಕಿದ 7 ದಿನಗಳ ನಂತರ ಈ ಪ್ರಕ್ರಿಯೆ ಬಗೆಹರಿಯಲಿದೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ಉದ್ದೇಶದಿಂದ ವಿಳಂಬವಾಗಿದೆ. ನಾನು ನಿಮ್ಮ ಹಾಡಿಗೆ ವಿದ್ಯುತ್ ನೀಡಬಾರದೆಂಬ ಉದ್ದೇಶ ನನಗಿಲ್ಲ. ನಮಗೂ ಗಿರಿಜನರ ಕಷ್ಟ ತಿಳಿದಿದೆ. 1980ಕ್ಕೂ ಮುಂಚೆ ಹಾಡಿಗಳಿಗೆ ಸೌಲಭ್ಯ ಕಲ್ಪಿಸುವ ಅವಕಾಶವಿತ್ತು. ಈಗ ಅನೇಕ ತೊಡಕುಗಳಿದ್ದು ಶೀಘ್ರದಲ್ಲೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ನೀವು ಸಹಕರಿಸಿ, 7 ದಿನ ಕಾದರೆ ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆಯಲಿದೆ. ಒಟ್ಟಾರೆ 40 ದಿನದೊಳಗೆ ನಿಮ್ಮ ಗ್ರಾಮದ ಸಮಸ್ಯೆಗೆ ಪರಿಹಾರ ದೊರಕಲಿದೆ.

ಸಂತೋಷ್ ಕುಮಾರ್, ಡಿಎಫ್ಓ