ಸಾರಾಂಶ
ಕುಷ್ಟಗಿ: ತಾಲೂಕಿನ ಧಾರ್ಮಿಕ ಕ್ಷೇತ್ರವಾದ ದೋಟಿಹಾಳ ಗ್ರಾಮದ ಅವಧೂತ ಶುಖಮುನಿಸ್ವಾಮಿ ದೇವಸ್ಥಾನದ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಜಮೆ ಇದ್ದರೂ ಅಭಿವೃದ್ಧಿಯಿಂದ ವಂಚಿತವಾಗಿರುವುದು ವಿಪರ್ಯಾಸದ ಸಂಗತಿ.
ತಾಲೂಕಿನಲ್ಲಿ ದೊಡ್ಡ ದೇವಸ್ಥಾನದ ಹಾಗೂ ದೊಡ್ಡ ಜಾತ್ರೆ ಎನಿಸಿಕೊಂಡ ಈ ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಸ್ವಾಮಿಗಳ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕಂದಾಯ ಇಲಾಖೆಯು ಹಿಂದೇಟು ಹಾಕುತ್ತಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಈ ದೇವಸ್ಥಾನ ಕಮಿಟಿಯ ಅಧ್ಯಕ್ಷರು, ತಹಸೀಲ್ದಾರ ಇದ್ದರೂ ಮೂಲಭೂತ ಸೌಕರ್ಯಗಳು ಭಕ್ತರಿಗೆ ಸಿಗುತ್ತಿಲ್ಲ.ಮಾ.10ಕ್ಕೆ ಜಾತ್ರೆ: ಅವಧೂತ ಶುಖಮುನಿ ಸ್ವಾಮಿ ಜಾತ್ರಾ ಮಹೋತ್ಸವವು ಮಾ.10ಕ್ಕೆ ನಡೆಯುತ್ತಿದೆ. ಪಲ್ಲಕ್ಕಿ ಉತ್ಸವವು ಮಾ.3ಕ್ಕೆ ಆರಂಭವಾಗಲಿದೆ. ಸುಮಾರು ಎಂಟು ದಿನಗಳ ಕಾಲ ಪಲ್ಲಕ್ಕಿ ಉತ್ಸವವು ಹಗಲು ರಾತ್ರಿ ಮೆರವಣಿಗೆ ಮೂಲಕ ನಡೆಯಲಿದೆ. ಮಾ.10ಕ್ಕೆ ಮಹಾರಥೋತ್ಸವ ನಡೆಯಲಿದ್ದು. 15 ದಿನಗಳ ಕಾಲ ಸಾವಿರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ಸಪ್ತ ಭಜನೆ ಸೇರಿದಂತೆ ಅನ್ನ ದಾಸೋಹ ಕಾರ್ಯಕ್ರಮ ನಡೆಯುತ್ತದೆ.ಸೌಲಭ್ಯಗಳ ಕೊರತೆ: ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಮೂತ್ರಾಲಯ, ಮಹಿಳೆಯರ ಸ್ನಾನಗೃಹಗಳ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆ ಕಾಡುತ್ತಿದ್ದರೂ ಕಂದಾಯ ಇಲಾಖೆಯು ಅಭಿವೃದ್ಧಿಗೆ ಮುಂದಾಗುತ್ತಿಲ್ಲದಿರುವುದು ವಿಚಿತ್ರದ ಸಂಗತಿ.ಸಭೆಯಲ್ಲಿ ಮಾತ್ರ ಚರ್ಚೆ: ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತ್ರ ಚರ್ಚೆಯಾಗುತ್ತವೆಯೇ ಹೊರತು ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಕುರಿತಂತೆ ಗ್ರಾಮಸ್ಥರು, ಯುವಕರು ಕುಷ್ಟಗಿಯ ತಹಶೀಲ್ದಾರಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ ಎನ್ನುತ್ತಾರೆ ಯುವಕರು.ಏನೇನು ಸೌಲಭ್ಯ?: ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಯಾತ್ರಿ ನಿವಾಸ, ದಾಸೋಹ ಕೊಠಡಿ, ಮಠದ ಸುತ್ತ ಕಂಪೌಂಡ್ ನಿರ್ಮಾಣ, ಪೂಜಾ ಸಾಮಗ್ರಿ ಸೇರಿದಂತೆ ಇನ್ನಿತರ ಸಾಮಗ್ರಿಗಳ ಮಾರಾಟಕ್ಕೆ ಮಳಿಗೆ ನಿರ್ಮಾಣ, ದೇವಾಲಯದ ಆವರಣದಲ್ಲಿ ಉದ್ಯಾನ ನಿರ್ಮಿಸಬೇಕು. ಕುಷ್ಟಗಿ ಹಾಗೂ ಕ್ಯಾದಿಗುಪ್ಪಾ ರಾಷ್ಟ್ರೀಯ ಹೆದ್ದಾರಿಯಿಂದ ಶುಖಮುನಿ ಸ್ವಾಮಿಗಳ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಮಹಾದ್ವಾರ ನಿರ್ಮಿಸಬೇಕೆಂದು ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಒತ್ತಾಸೆಯಾಗಿದೆ.ದೋಟಿಹಾಳ ಗ್ರಾಮದ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಜಮಾಯಿಸುತ್ತಾರೆ. ಭಕ್ತರಿಗೆ ಸ್ನಾನಗೃಹ, ಶೌಚಾಲಯಗಳು ಇರಲಾರದ ಕಾರಣ ಬಯಲಿಗೆ ಹೋಗಬೇಕಾಗುತ್ತದೆ. ಕಮಿಟಿಯ ಅಧ್ಯಕ್ಷರು, ತಹಶೀಲ್ದಾರರು, ಗ್ರಾಪಂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ತಾಲೂಕಾಧ್ಯಕ್ಷ ಪರಶುರಾಮ್ ಈಳಗೇರ.ದೇವಸ್ಥಾನದ ಅಭಿವೃದ್ಧಿ ಕುರಿತು ಶಾಸಕರು, ತಹಸೀಲ್ದಾರರು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಪಾತ್ರರಾಗಬೇಕು ಎನ್ನುತ್ತಾರೆ ಸಮಾಜ ಸೇವಕ ಶ್ರೀನಿವಾಸ ಕಂಟ್ಲಿ.ಜಾತ್ರಾ ಮಹೋತ್ಸವದ ಅಂಗವಾಗಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ದೋಟಿಹಾಳ ಗ್ರಾಪಂ ಪಿಡಿಒ ಮುತ್ತಣ್ಣ.