ಮಸಣ ಕಾರ್ಮಿಕರಿಗೆ ಗೌರವಧನ, ಸೌಕರ್ಯ ಒದಗಿಸಲು ಒತ್ತಾಯ

| Published : Oct 27 2025, 12:30 AM IST

ಸಾರಾಂಶ

ಮಸಣ ಕಾರ್ಮಿಕರು ಮಾನವೀಯತೆಯ ಅತ್ಯಂತ ಕಠಿಣ ಸೇವೆ ಸಲ್ಲಿಸುತ್ತಿದ್ದಾರೆ.

ಕಂಪ್ಲಿ: ಪಟ್ಟಣದ ಸ್ಮಶಾನ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಸಣ ಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯಗಳು ಹಾಗೂ ಗೌರವಧನ ನೀಡುವಂತೆ ರಾಜ್ಯ ಮಸಣ ಕಾರ್ಮಿಕರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

ಸಭೆಯ ವೇಳೆ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ನಿಂಗಪ್ಪ ಮಾತನಾಡಿ, ಮಸಣ ಕಾರ್ಮಿಕರು ಮಾನವೀಯತೆಯ ಅತ್ಯಂತ ಕಠಿಣ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರ ಕೆಲಸದ ಸ್ಥಳಗಳಲ್ಲಿ ತೀವ್ರವಾದ ಅನಾನುಕೂಲತೆಗಳು ಎದುರಾಗುತ್ತಿವೆ. ಸ್ಮಶಾನ ಪ್ರದೇಶಗಳಲ್ಲಿ ಶೌಚಾಲಯ, ಕುಡಿಯುವ ನೀರು ಹಾಗೂ ಸುರಕ್ಷತಾ ಪರಿಕರಗಳ ಕೊರತೆ ಇದೆ. ಈ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡಬೇಕು. ಸ್ಮಶಾನಗಳಿಗೆ ಅಂತ್ಯಸಂಸ್ಕಾರಕ್ಕಾಗಿ ಹೆಣಗಳನ್ನು ತರಲು ಟ್ರೈ ವ್ಯವಸ್ಥೆ ಮಾಡಬೇಕು. ಸ್ಮಶಾನ ಪ್ರದೇಶದಲ್ಲಿ ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಂತ್ಯಸಂಸ್ಕಾರಕ್ಕೆ ಬಂದವರು ಕೈಕಾಲು ತೊಳೆಯಲು ವ್ಯವಸ್ಥೆ ಇರಬೇಕು. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ರಾತ್ರಿ ವೇಳೆ ಅಂತ್ಯಸಂಸ್ಕಾರದ ಅನುಕೂಲಕ್ಕಾಗಿ ಬೆಳಕಿನ ವ್ಯವಸ್ಥೆ ಅತಿ ಅಗತ್ಯ. ಸ್ಮಶಾನ ಭೂಮಿಯ ಸುತ್ತಲೂ ತಡೆಗೋಡೆ ನಿರ್ಮಿಸಿ ಭದ್ರತೆ ಒದಗಿಸಬೇಕು. ಜೊತೆಗೆ ಹಸಿರು ಪರಿಸರ ನಿರ್ಮಾಣಕ್ಕಾಗಿ ಸಸಿಗಳನ್ನು ನೆಡುವ ಕೆಲಸ ಕೈಗೊಳ್ಳಬೇಕು ಎಂದರು.

ಅಂತ್ಯಸಂಸ್ಕಾರದ ಕುಣಿ ತೊಡುವ ಮತ್ತು ಮುಚ್ಚುವ ಕೆಲಸಕ್ಕಾಗಿ ಅಗತ್ಯವಾದ ಗುದ್ದಲಿ, ಚಲಿಕೆ, ಕಬ್ಬಿಣದ ಹಾರೆ, ಪುಟ್ಟಿ, ಟ್ರೈ ಮುಂತಾದ ಉಪಕರಣಗಳನ್ನು ಪುರಸಭೆ ಒದಗಿಸಬೇಕು. ಇವುಗಳನ್ನು ಸುರಕ್ಷಿತವಾಗಿ ಇಡಲು ರೂಮ್ ನಿರ್ಮಿಸಿ ಕೊಡಬೇಕು. ಹೆಣಗಳನ್ನು ಸುಡಲು ಕಬ್ಬಿಣದ ಚಾನೆಲ್ ವ್ಯವಸ್ಥೆ ಅಗತ್ಯವಿದೆ. ಈ ಎಲ್ಲ ಸೌಕರ್ಯಗಳೊಂದಿಗೆ, ಸ್ಮಶಾನ ಕಾರ್ಮಿಕರಿಗೆ ಗೌರವಧನ ಹಾಗೂ ಸುರಕ್ಷತಾ ಪರಿಕರಗಳನ್ನು ಪುರಸಭೆ ಮೂಲಕ ತಕ್ಷಣ ವಿತರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಸಿ. ಮಾಯಪ್ಪ, ತಳವಾರ ಹುಲುಗಪ್ಪ, ನಂ.2 ಮುದ್ದಾಪುರದ ಬಸವರಾಜ, ಬಾವಿಕಟ್ಟೆ ಚನ್ನಬಸವರಾಜ, ಎ. ಸ್ವಾಮಿ ಉಪಸ್ಥಿತರಿದ್ದರು.