ಸಾರಾಂಶ
ಕುಷ್ಟಗಿ ಪಟ್ಟಣದ ಶಾಸಕರ ಕಾರ್ಯಾಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೃಷಿ ಕೂಲಿಕಾರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಶಾಸಕ ದೊಡ್ಡನಗೌಡ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕುಷ್ಟಗಿ: ಪಟ್ಟಣದ ಶಾಸಕರ ಕಾರ್ಯಾಲಯದ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೃಷಿ ಕೂಲಿಕಾರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಶಾಸಕ ದೊಡ್ಡನಗೌಡ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ರೈತ ಸಂಘದ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ಕುಷ್ಟಗಿ ತಾಲೂಕಿನ ರೈತರು ಒಣಬೇಸಾಯ ನಂಬಿ ಜೀವನ ನಡೆಸಬೇಕಾಗಿದೆ. ರೈತರು ಜೀವನ ನಡೆಸಲು ಸಮರ್ಪಕವಾದ ಮನೆ ಇಲ್ಲ. ಆದಕಾರಣ ವಸತಿರಹಿತರನ್ನು ಗುರುತಿಸುವ ಮೂಲಕ ನಿವೇಶನ, ಮನೆ ನೀಡಬೇಕು ಎಂದರು.ಬಡ ರೈತರಿಗೆ ಭೂ ಸುಧಾರಣೆ ಕಾಯ್ದೆ ಅನ್ವಯ ಹೆಚ್ಚುವರಿ ಜಮೀನುಗಳನ್ನು ಹಂಚಿಕೊಡುವಲ್ಲಿ ವಿಫಲವಾಗಿವೆ. ಈ ಸಲ ಮಂಡಿಸುವ ಮುಂಗಡಪತ್ರದಲ್ಲಿ ನಿವೇಶನರಹಿತರಿಗೆ ನಿವೇಶನ ನೀಡಲು, ಮನೆ ಇಲ್ಲದ ಕುಟುಂಬಗಳಿಗೆ ಮನೆ ಮಂಜೂರು ಮಾಡಲು ಕುಷ್ಟಗಿ ತಾಲೂಕಿಗೆ ಅನುದಾನ ಒದಗಿಸಬೇಕು ಎಂದರು.
ಬೇಡಿಕೆಗಳು: ನೆರೆಬೆಂಚಿ, ಕುರಬನಹಾಳ, ಕಂದಕೂರ, ಹಿರೇಬನ್ನಿಗೊಳ, ತಳವಗೇರಾ, ನಿಡಶೇಸಿ, ವಣಗೇರಾ, ಬೋದೂರು, ಬೋದೂರು ತಾಂಡಾ, ಬಿಜಕಲ್, ಶಿರಗುಂಪಿ, ಬಳ್ಳೂಟಗಿ, ನಂದಾಪುರ, ಮ್ಯಾಗಲಡೊಕ್ಕಿ ಗ್ರಾಮಗಳಲ್ಲಿ ನಿವೇಶನ ರಹಿತರ ಮನೆ ಇಲ್ಲದವರ ಸರ್ವೆ ಮಾಡಿ ಅಂಥವರಿಗೆಲ್ಲ ಮನೆ, ನಿವೇಶನ ಮಂಜೂರ ಮಾಡಬೇಕು. ಮನೆ ಕಟ್ಟಿಕೊಳ್ಳಲು ₹೫ ಲಕ್ಷ ಸಹಾಯಧನ ನೀಡಬೇಕು. ಕುಷ್ಟಗಿ ತಾಲೂಕಿನಲ್ಲಿ ಇರುವ ಸರ್ಕಾರಿ ಪಡಾ ಜಮೀನು, ಹೆಚ್ಚುವರಿ ಜಮೀನನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಡ ರೈತರಿಗೆ ಮತ್ತು ಕೃಷಿ ಕೂಲಿಕಾರರಿಗೆ ಹಂಚಬೇಕು. ಈಗಾಗಲೆ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಅಕ್ರಮ ಮಾಡಿದ ಸರ್ಕಾರಿ ಜಮಿನು ಮತ್ತು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ ರೈತರಿಗೆ ಕೂಡಲೆ ಹಕ್ಕುಪತ್ರ ನೀಡಬೇಕು ಎಂದು ಕೋರಿದ್ದಾರೆ.ತಾಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು.
ತೊಗರಿ ಕೇಂದ್ರಗಳಲ್ಲಿ ರೈತರು ಅನುಭವಿಸುತ್ತಿರುವ ತೊಂದರೆ ನಿವಾರಿಸಬೇಕು ಮತ್ತು ಸರ್ಕಾರ ಘೋಷಣೆ ಮಾಡಿದಂತೆ ಕನಿಷ್ಠ ಬೆಂಬಲ ಬೆಲೆ ₹8 ಸಾವಿರದಂತೆ ಖರೀದಿಸಿ, ಅದರಂತೆ ರಸೀದಿ ನೀಡಬೇಕು, ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರ ಘೋಷಣೆ ಮಾಡಿದ ಕನಿಷ್ಠ ಕೂಲಿ ₹440 ನೀಡಬೇಕು. ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ ನಡೆದ ಚೆನ್ನಮ್ಮ ವೃತ್ತದಿಂದ ಎಸ್‌ಸಿ ಕಾಲನಿ ವರೆಗೆ ನಡೆಯುತ್ತಿರುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಸಂಗಮ್ಮ ಗುಳಗೌಡರ, ಶೇಖರಪ್ಪ ಎಲಿಗಾರ, ಬಸವರಾಜ ಮೇಳಿ, ಅಮರೇಗೌಡ ಪೊಲೀಸ್‌ಪಾಟೀಲ್, ಮಲ್ಲಿಕಾರ್ಜುನ ತಳಗೇರಿ, ಅಕ್ಕಮ್ಮ ತಳಗೇರಿ, ಬಸಪ್ಪ ತಳಗೇರಿ, ಸಂಗನಗೌಡ ತಳಗೇರಿ, ಕವಿತಾ ತಳಗೇರಿ ಇದ್ದರು.ರೈತ ಸಂಘ ಹಾಗೂ ಕೃಷಿ ಕೂಲಿಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಗಮನಕ್ಕೆ ತರುವ ಮೂಲಕ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.