ಸಾರಾಂಶ
ರಾಣಿಬೆನ್ನೂರು: ನಗರದ ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್ ನಿಲ್ದಾಣದ ಎದುರು ಪ್ರತಿಭಟಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಜಿಲ್ಲೆಯಲ್ಲಿ ಅತಿದೊಡ್ಡ ತಾಲೂಕು ಕೇಂದ್ರವಾಗಿದ್ದರೂ ನಗರಕ್ಕೆ ಸರಿಯಾದ ಬಸ್ ನಿಲ್ದಾಣ ಇಲ್ಲದೇ ಇರುವುದು ಖೇದಕರ ಸಂಗತಿಯಾಗಿದೆ. ಈಗಿರುವ ಬಸ್ ನಿಲ್ದಾಣ ಕೂಡ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ದೇವರಗುಡ್ಡ, ಮೈಲಾರ, ಕೃಷ್ಣಮೃಗ ಅಭಯಾರಣ್ಯ, ಚೌಡಯ್ಯದಾನಪುರ, ಉಕ್ಕಡಗಾತ್ರಿ, ಮೆಡ್ಲೇರಿ ಬೀರಲಿಂಗೇಶ್ವರ ದೇವಸ್ಥಾನ, ಐರಣಿ ಹೊಳಿಮಠ ಸೇರಿದಂತೆ ಅನೇಕ ಪ್ರವಾಸಿ ಕೇಂದ್ರಗಳಿವೆ. ಇದಲ್ಲದೆ ನಗರ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಬೀಜೋತ್ಪಾದನೆಗೆ ಹೆಸರು ವಾಸಿಯಾಗಿದೆ. ಹೀಗಾಗಿ ಬಸ್ ನಿಲ್ದಾಣಕ್ಕೆ ಪ್ರತಿ ದಿನವೂ 500ಕ್ಕಿಂತ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಆದರೆ, ಬಸ್ ನಿಲ್ದಾಣದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ನಗರದ ಬಸ್ ನಿಲ್ದಾಣಕ್ಕೆ ಬಂದಾಗ ಶೌಚಾಲಯ ವ್ಯವಸ್ಥೆ ನೋಡಿದರೆ ಮೂಗು ಮುಚ್ಚಿಕೊಳ್ಳುವ ಸ್ಥಿತಿಗೆ ಬಂದಿದೆ. ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ. ಬಸ್ ನಿಲ್ದಾಣದ ಮುಂಭಾಗದ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಜಾಗೆ ಸಾಕಾಗುತ್ತಿಲ್ಲ. ಇದರಿಂದ ಜನರು ಬಸ್ ನಿಲ್ದಾಣ ಸುತ್ತಮುತ್ತ ಪಾರ್ಕ್ ಮಾಡಿ ಹೋಗುತ್ತಿದ್ದಾರೆ. ಈ ಹಿಂದೆ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಶೌಚಾಲಯ ಸ್ಥಳಾಂತರಕ್ಕೆ ಸಾಕಷ್ಟು ಮನವಿ ಕೊಟ್ಟಿದ್ದೇವೆ. ಅದರಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಶೌಚಾಲಯ ನಿರ್ಮಾಣಕ್ಕೆ ಸ್ಥಳವನ್ನು ನಿಗದಿ ಮಾಡಿದ್ದಾರೆ. ಆದರೆ ಇವತ್ತಿಗೂ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು, ಸುಮಾರು ವರ್ಷಗಳಿಂದ ಅದು ಹದಗೆಟ್ಟಿದೆ. ಕೂಡಲೇ ಹೊಸ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಬಸ್ ನಿಲ್ದಾಣದಲ್ಲಿ ಅತಿ ಹೆಚ್ಚು ಕಳ್ಳತನವಾಗುತ್ತಿದ್ದು, ಸಿ.ಸಿ. ಕ್ಯಾಮೆರಾ ಅಳವಡಿಸಿ ಜನರಿಗೆ ಜಾಗೃತಿ ಮೂಡಿಸುವಂತಹ ಕೆಲಸ ಆಗಬೇಕು. ಆದ್ದರಿಂದ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಶಿವಕುಮಾರ ಜಾಧವ, ಸಿದ್ಧಾರೂಢ ಗುರುಂ, ಗೋಪಿ ಕುಂದಾಪುರ, ಪಾಲಾಕ್ಷಪ್ಪ ಕಡೇಮನಿ, ಚಂದ್ರಪ್ಪ ಬಣಕಾರ, ವಿಜಯ ಮಿಳ್ಳಿ, ಪ್ರೇಮಾ ಅಂಗಡಿ, ಸಂತೋಷ ಯಡಚಿ. ಬಾಷಾ ಹಂಪಪಟ್ಟಣ, ಪರಶುರಾಮ ಕುರವತ್ತಿ, ಬಸವರಾಜ ದಳವಾಯಿ, ಸಂತೋಷ ಕನಪ್ಪಳ್ಳವರ ಮತ್ತಿತರರು ಉಪಸ್ಥಿತರಿದ್ದರು.