ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ

| Published : Sep 10 2024, 01:42 AM IST

ಸಾರಾಂಶ

ತಾಲೂಕಿನ ಪರಶುರಾಮಪುರ ಗಡಿಭಾಗದಲ್ಲಿರುವ ಆಂಧ್ರ ಮತ್ತು ಕರ್ನಾಟವನ್ನು ಬೆಸೆಯುವ ರಾಜ್ಯ ಹೆದ್ದಾರಿ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಪ್ರತಿನಿತ್ಯ ನೂರಾರು ಬಸ್‌ಗಳು, ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದರೂ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ. ಚಿತ್ರಲಿಂಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ತಾಲೂಕು ಆಡಳಿತ ಹಾಗೂ ನಾಡಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಪ್ರತಿನಿತ್ಯ ದೂರದ ಊರುಗಳಿಂದ ಬರುವ ಪ್ರಯಾಣಿಕರು ಮಹಿಳೆಯರು, ಮಕ್ಕಳು, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ತಂಗುದಾಣ ಮುಂತಾದ ಸೌಲಭ್ಯಗಳಿಲ್ಲದೆ ನಡುರಸ್ತೆಯಲ್ಲಿ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ತಾಲೂಕು ಆಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವೀರಭದ್ರಪ್ಪ, ವೆಂಕಟರಮಣಪ್ಪ, ಎಚ್. ರಾಮಮೂರ್ತಿ, ದುರುಗಪ್ಪ, ರವೀಂದ್ರ ರೆಡ್ಡಿ, ಮಾರುತಿ, ಗೋವಿಂದಪ್ಪ, ಯೋಗೇಶ್, ಮಾಲತೇಶ್, ರತ್ನಮ್ಮ, ಸುಧೀರ್, ವಿನಯ್, ಚಂದ್ರಶೇಖರ್, ನರಸಿಂಹಪ್ಪ ಮುಂತಾದವರು ಭಾಗವಹಿಸಿದ್ದರು.