ಕುಷ್ಟಗಿ: ಪಟ್ಟಣದ ಸಂದೀಪ ನಗರದ 8ನೇ ವಾರ್ಡ್‌ನಲ್ಲಿ 30 ವರ್ಷಗಳಿಂದ ಆಶ್ರಯ ಬಡಾವಣೆಯಲ್ಲಿ ವಾಸವಿರುವ ನಿವಾಸಿಗಳಿಗೆ ಜಾಗವನ್ನು ಸಕ್ರಮಗೊಳಿಸಿ ಸದರಿ ನಿವಾಸಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಲು ಕ್ರಮ ವಹಿಸುವಂತೆ ಕರವೇ ಸ್ವಾಭಿಮಾನಿ ಸೇನೆ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿಗೆ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಕುಷ್ಟಗಿ ಪಟ್ಟಣದ ಸಂದೀಪ ನಗರದ ವಾರ್ಡ್ ನಂ.8ರಲ್ಲಿ 30ಕ್ಕೂ ಅಧಿಕ ವರ್ಷಗಳಿಂದ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಸದರಿ ಜಾಗ ಬೇರೆಯವರ ಹೆಸರಿಗೆ ಹಕ್ಕು ಪತ್ರ ನೀಡುವ ಹುನ್ನಾರ ನಡೆದಿದ್ದು, ಈ ಹುನ್ನಾರದಿಂದ ವಾಸವಿರುವ ನಿರ್ಗತಿಕರ ಕುಟುಂಬಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದರು.ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳನ್ನು ಹೊರತುಪಡಿಸಿ ಉಳಿದ ಖಾಲಿ ಜಾಗದಲ್ಲಿ ನಿರ್ಗತಿಕರು, ಕಡುಬಡವರು ಮನೆ ಮತ್ತು ಶೆಡ್ ನಿರ್ಮಿಸಿಕೊಂಡು ವಾಸವಾಗಿರುತ್ತಾರೆ. ತಮ್ಮ ಪುರಸಭೆಯ ಕೆಲವು ಸಿಬ್ಬಂದಿ ಮತ್ತು ಕಿಡಿಗೇಡಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವದು ಖಂಡನೀಯವಾಗಿದೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳು ಸಂದೀಪನಗರದ ಸುಮಾರು 80 ಕುಟುಂಬಗಳಿಗೆ ನಿವೇಶನ ನೀಡಲು ಪುರಸಭೆ ಕುಷ್ಟಗಿಗೆ ಸೂಚಿಸಿ ಎಲ್ಲರಿಗೂ ಹಕ್ಕುಪತ್ರ ನೀಡಿ ಕ್ರಮ ವಹಿಸಲು ತಿಳಿಸಿದ್ದರೂ ಸಹಿತ ಪುರಸಭೆಯವರು ಯಾವುದೇ ಕ್ರಮವಹಿಸಿರುವುದಿಲ್ಲ. ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇಷ್ಟಾದರೂ ಸಹಿತ ಪುರಸಭೆ ಸಿಬ್ಬಂದಿ ಇವರ ಶೆಡ್ ಹಾಗೂ ಮನೆಗಳನ್ನು ತೆರವುಗೊಳಿಸಲು ತಾಕೀತು ಮಾಡಿ ಹೋಗಿದ್ದಾರೆ. ಇಲ್ಲವಾದರೆ ಜೆಸಿಬಿ ಮೂಲಕ ತೆರವುಗೊಳಿಸುತ್ತೇವೆ ಅಂತಾ ಹೇಳಿದ್ದಾರೆ. ಆಶ್ರಯ ಬಡಾವಣೆ ಜಾಗ ಸಕ್ರಮಗೊಳಿಸಲು ಪರಿಶೀಲನೆ ನಡೆಸಿ ದಲಿತರು, ಹಿಂದುಳಿದ ವರ್ಗಕ್ಕೆ ಸೇರಿದ ಕಡುಬಡುವರಿಗೆ ನ್ಯಾಯ ಒದಗಿಸಬೇಕೆಂದು ತಿಳಿಸಿದ ಅವರು ನ್ಯಾಯ ಒದಗಿಸದೆ ಇದ್ದಲ್ಲಿ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮಾತನಾಡಿ, ಸರ್ವೆ ಕಾರ್ಯ ನಡೆಸುವ ಮೂಲಕ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಶಂಕರ್ ಕಲಬಾವಿ, ಸಿದ್ದಪ್ಪ ಕಲಾಲಬಂಡಿ, ಬೇಬಿಜಾನ ಜಾತಗಾರ್, ಮರಿಯಪ್ಪ ಹಕ್ಕಲ್, ಬಸವರಾಜ್ ಹೊಸಮನಿ, ಹನಮೇಶ್ ಬಂಡಿ ವಡ್ಡರ್, ಶಿವಣ್ಣ ಡಂಬರ್, ಸುಕರಾಜ್ ತಾಳಕೇರಿ, ಮುತ್ತಣ್ಣ ಹಕ್ಕಲ್, ವಿಜಯಕುಮಾರ್ ಹಕ್ಕಲ್, ಶರಣು ಪ್ರಸಾದ್ ಸೇರಿದಂತೆ ಅನೇಕರು ಇದ್ದರು. ಕನಕದಾಸ ವೃತ್ತದಿಂದ ಮಾರುತಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪುರಸಭೆ ಕಾರ್ಯಾಲಯದವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು.