ಅಸ್ಪೃಶ್ಯರೆಂದು ದಾಖಲಿಸಿ, ಶೇ.6 ಮೀಸಲಾತಿ ನೀಡಲು ಆಗ್ರಹ

| Published : Sep 20 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರ ಅವೈಜ್ಞಾನಿಕ ಒಳ ಮೀಸಲಾತಿ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟದಿಂದ ಶುಕ್ರವಾರ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ರಾಜ್ಯ ಸರ್ಕಾರ ಅವೈಜ್ಞಾನಿಕ ಒಳ ಮೀಸಲಾತಿ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ಬಂಜಾರ, ಭೋವಿ, ಕೊರಮ, ಕೊರಚ ಮೀಸಲಾತಿ ಒಕ್ಕೂಟದಿಂದ ಶುಕ್ರವಾರ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಭೋವಿ ಸಮಾಜದ ಮುಖಂಡ ವೀರೇಶ ಸಿದ್ರಾಂಪುರ ಮಾತನಾಡಿ, ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ಶತಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಸಮುದಾಯಗಳಾಗಿವೆ. ಹಿಂದಿನ ಬಿಜೆಪಿ ಸರ್ಕಾರ ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕ ವರ್ಗ ಸೃಷ್ಠಿಸಿ ಶೇ.4.5 ರಷ್ಟು ಮೀಸಲಾತಿ ನೀಡಿತ್ತು. ಅಲ್ಲದೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ಯನ್ನು ಶಿಫಾರಸ್ಸು ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಮಾಧುಸ್ವಾಮಿಯವರ ಉಪಸಮಿತಿಯ ಶಿಫಾರಸ್ಸುಗಳನ್ನು ಕೈಬಿಟ್ಟು ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡಿತ್ತು. ನಂತರ ಈ ಸಮಿತಿಯ ಶಿಫಾರಸ್ಸನ್ನು ಕೈಬಿಟ್ಟು ಸಚಿವ ಸಂಪುಟ ಸಮಿತಿಯಲ್ಲಿ ಎರಡು ಪ್ರವರ್ಗಗಳ ಗುಂಪುಗಳನ್ನು ಒಗ್ಗೂಡಿಸಿ ಶೇ.5 ರಷ್ಟು ಮೀಸಲಾತಿ ನೀಡಿರುವುದು ನಾಲ್ಕು ಸಮುದಾಯಕ್ಕೆ ಮಾಡಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಕುಳುವ ಮಹಾಸಂಘದ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ ಮಾತನಾಡಿದರು. ರಾಜ್ಯ ಸರ್ಕಾರ ಬಂಜಾರ, ಭೋವಿ, ಕೊರಮ, ಕೊರಚ ಜೊತೆಗೆ ಅಲೆಮಾರಿ ಸಮುದಾಯದ 59 ಜಾತಿಗಳನ್ನು ಒಗ್ಗೂಟಿಸಿ ಒಟ್ಟಾರೆ 63 ಜಾತಿಗಳಿಗೆ ಕೇವಲ ಶೇ.5 ರಷ್ಟು ಮೀಸಲಾತಿ ನೀಡಿ ಸ್ಪೃಶ್ಯ ಜಾತಿಗಳು ಎಂದು ಹಣೆಪಟ್ಟಿ ಕಟ್ಟಿರುವುದು ಅಸಂವಿಧಾನಿಕವಾಗಿದೆ. ಹೀಗಾಗಿ ಅಸ್ಪೃಶ್ಯ ಜಾತಿಗಳೆಂದು ದಾಖಲಿಸಬೇಕು. ಶೇ.6 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಂಜಾರ ಸಮಾಜದ ಮುಖಂಡ ಅಮರೇಶ ರೈತನಗರ ಕ್ಯಾಂಪ್, ಒಕ್ಕೂಟದ ಮುಖಂಡರಾದ ಗೋವಿಂದರಾಜ ಸೋಮಲಾಪುರ, ಲಕ್ಷ್ಮಣ ಭೋವಿ, ಶರಣಬಸವ ಉಮಲೂಟಿ, ಸುರೇಶ ಜಾದವ್, ಲಾಲಪ್ಪ ರಾಠೋಡ್ ಲಿಂಗಸುಗೂರು, ಹನುಮಂತ ಹಂಚಿನಾಳ, ರವಿ ಚವ್ಹಾಣ್, ಹೊಳೆಯಪ್ಪ, ಶ್ರೀನಿವಾಸ ಮೇಸ್ತ್ರಿ, ಕೃಷ್ಣಕುಮಾರಿ ಸೇರಿದಂತೆ ಬಂಜಾರ, ಭೋವಿ, ಕೊರಮ, ಕೊರಚ ಸಮಾಜದ ಸಾವಿರಾರು ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.