ರೈತರ ಬಗ್ಗೆ ಕಾಳಜಿ ತೋರದ ಜನಪ್ರತಿನಿಧಿಗಳು ಮತ್ತು ಲಜ್ಜೆಗೆಟ್ಟ ಅಧಿಕಾರಿಗಳ ವಿರುದ್ಧ ನಾನಾ ಹಂತದಲ್ಲಿ ಹೋರಾಟ
ಹೂವಿನಹಡಗಲಿ: ತಾಲೂಕಿನ ಹ್ಯಾರಡದ ಮಲಿಯಮ್ಮನ ಹಳೆ ಕೆರೆ, ಹೊಸಕೆರೆ, ದಾಸನಹಳ್ಳಿ ಕೆರೆಗಳಿಗೆ ವಾರದೊಳಗೆ ಶಾಕಾರ ಜಾಕ್ವೆಲ್‌ನಿಂದ ನೀರು ಹರಿಸದಿದ್ದರೇ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಕೆರೆ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ತಾಲೂಕಿನ ಹ್ಯಾರಡ ಗ್ರಾಮದ ಮಲಿಯಮ್ಮ ಕೆರೆಯಂಗಳದಲ್ಲಿ ಹ್ಯಾರಡ, ಹೊಳಲು, ದಾಸನಹಳ್ಳಿ, ಕಳಸಾಪುರ, ನಡುವಿನಹಳ್ಳಿ, ಗೋರವಿನಗುಡ್ಡದ ತಾಂಡಾ ಸೇರಿದಂತೆ ಹತ್ತಾರು ಹಳ್ಳಿಗಳ ರೈತರು ಹೋರಾಟದ ರೂಪರೇಷೆಗಳ ಸಿದ್ಧತೆ ಸಭೆಯಲ್ಲಿ ಹರವಿ ಪ್ರಕಾಶ ಮಾತನಾಡಿ, ಶಾಕಾರ ಜಾಕ್ವೆಲ್‌ನಿಂದ ಹ್ಯಾರಡದ ಎರಡು ಕೆರೆ, ದಾಸನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೋಟಾರ್ ಸಾಫ್ಟ್ ರಿಪೇರಿಗೆ ತಿಂಗಳು ಗಂಟಲೆ ಕಾಯ್ದರೂ ಇಂದಿಗೂ ದುರಸ್ತಿ ಇಲ್ಲ, ರೈತರ ಬಗ್ಗೆ ಕಾಳಜಿ ತೋರದ ಜನಪ್ರತಿನಿಧಿಗಳು ಮತ್ತು ಲಜ್ಜೆಗೆಟ್ಟ ಅಧಿಕಾರಿಗಳ ವಿರುದ್ಧ ನಾನಾ ಹಂತದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆಂದು ಹೇಳಿದರು.ಆರಂಭದಲ್ಲಿ ರಾಜ್ಯ ಹೆದ್ದಾರಿ ತಡೆ, ವಿದ್ಯುತ್ ನಿಲುಗಡೆ, ವ್ಯಾಪಾರ ವಹಿವಾಟು ಬಂದ್ ಸೇರಿದಂತೆ ನಾನಾ ರೀತಿಯ ಹೋರಾಟಕ್ಕೆ ಸಾವಿರಾರು ರೈತರು ಸಜ್ಜಾಗಿದ್ದೇವೆ. ಕೆರೆಗೆ ನೀರು ಬರದಿದ್ದರೇ ನಾವೇಲ್ಲ ಗುಳೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದರು.
ಈ ಕೆರೆ ನೀರು ಸುತ್ತಮುತ್ತಲಿನ 24 ಹಳ್ಳಿಗಳ ರೈತರಿಗೆ ಜೀವನಾಡಿಯಾಗಿದ್ದು, 40 ಸಾವಿರ ಕುರಿ, ಮೇಕೆಗಳು, 20 ಸಾವಿರ ಜಾನುವಾರುಗಳಿಗೆ ಈ ಕೆರೆ ನೀರೇ ಆಧಾರ ಜತೆಗೆ ಮೂರುವರೆ ಸಾವಿರ ಹೆಕ್ಟೇರ್ ಪ್ರದೇಶದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿರುವ ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಜ್ವಲಂತ ಸಮಸ್ಯೆ ಇದ್ದರೂ ದಪ್ಪ ಚರ್ಮದ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಹೋರಾಟದಲ್ಲಿ ನಾವು ಜೈಲಿಗೆ ಹೋಗಲು ಸಿದ್ದರಾಗಿದ್ದೇವೆಂದು ಹೇಳಿದರು.ಕೋಡಬಾಳ ಚಂದ್ರಪ್ಪ ಮಾತನಾಡಿ, ಹ್ಯಾರಡ, ದಾಸನಹಳ್ಳಿ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ಈ ಹಿಂದೆ 4 ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ, ವಾರದೊಳಗೆ ನೀರು ಹರಿಸದಿದ್ದರೇ ಮುಂದಿನ ದಿನ ಹೋರಾಟದ ದಿಕ್ಕೇ ಬದಲಾಗುತ್ತದೆ ಎಂದರು.
ವಸಂತಪ್ಪ ಬೇವಿನಕಟ್ಟಿ ಮಾತನಾಡಿ, ಹ್ಯಾರಡ ಕೆರೆಗಳಿಗೆ ನೀರು ತುಂಬಿಸಲು ಈ ಹಿಂದೆ ಗರ್ಭಗುಡಿ ಯೋಜನೆಯಲ್ಲಿ ಸೇರಿತ್ತು. ಕೇವಲ 8 ಕಿಮೀ ದೂರವಿತ್ತು, ಆದರೆ ಈಗ ದೂರದ ಶಾಕಾರ ಬಳಿ ಜಾಕ್ವೆಲ್ ಮಾಡಿ 13 ಕಿಮೀ ದೂರ ಮಾಡಿದ್ದಾರೆ. ಕಳಪೆ ಪೈಪ್‌ಲೈನ್ ಮಾಡಿದ್ದಾರೆ, ಹೆಚ್ಚುವರಿ ಮೋಟಾರ್ ಇಲ್ಲ ಜತೆಗೆ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಇಲ್ಲ, ಒಂದು ಬಾರಿ ದುರಸ್ತಿಗೆ ಬಂದರೇ 2 ರಿಂದ 3 ತಿಂಗಳಾದರೂ ರಿಪೇರಿಯೇ ಆಗುತ್ತಿಲ್ಲ, ಈಗ ನದಿಯಲ್ಲಿ ನೀರಿದ್ದರೂ ಕೆರೆಗೆ ಹರಿಯುತ್ತಿಲ್ಲ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ವೀರಾಪೂರ ಮಂಜುನಾಥ ಮಾತನಾಡಿ, ಅನಾವಶ್ಯಕ ಯೋಜನೆಗಳಿಗೆ ಸರ್ಕಾರ ಕೋಟ್ಯಾಂತರ ಅನುದಾನ ನೀಡುತ್ತಿದೆ, ಆದರೆ ರೈತರ ಬದುಕಿಗೆ ಆಸರೆಯಾಗುವ ನೀರಾವರಿ ಹಾಗೂ ಕೆರೆ ತುಂಬಿಸುವ ಯೋಜನೆಗಳಿಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ, ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳು ಬತ್ತಿ ಹೋಗಿವೆ, ಬರದಲ್ಲಿ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಲಿ ಎಂದರು.
ಎಚ್.ಡಿ. ಜಗ್ಗೀನ್, ಹನುಮಂತಪ್ಪ, ನಾಗಪ್ಪ, ದೇವೇಂದ್ರಪ್ಪ, ಚಂದ್ರು, ಸೋಮಣ್ಣ ಸೇರಿದಂತೆ ಇತರರು ಮಾತನಾಡಿದರು.ಕೆರೆಯಂಗಳಲ್ಲಿ ಜರುಗಿದ ಸಭೆಯಲ್ಲಿ ನೂರಾರು ರೈತರು ಉಪಸ್ಥಿತರಿದ್ದರು.