ಮರಾಠರು ದೇವಸ್ಥಾನಗಳ ನಿರ್ಮಾಣ, ಪುತ್ಥಳಿಗಳ ಸ್ಥಾಪನೆಗೆ ಒತ್ತು ನೀಡುವ ಬದಲು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು.
ಹಳಿಯಾಳ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯಾದ ನಂತರ ಮರಾಠ ಸಮಾಜಕ್ಕೆ ಸಾಕಷ್ಟು ಅನುದಾನ, ಯೋಜನೆ ಲಭಿಸಲಾರಂಭಿಸಿವೆ. ಮರಾಠ ಸಮುದಾಯದವರು ತಮ್ಮ ಸರ್ವಾಂಗೀಣ ಪ್ರಗತಿಗಾಗಿ ಈ ಯೋಜನೆಗಳ ಸದುಪಯೋಗವನ್ನು ಪಡೆಯಬೇಕೆಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್ ಮನವಿ ಮಾಡಿದರು.
ಭಾನುವಾರ ಪಟ್ಟಣದ ಪುರಭವನದಲ್ಲಿ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಗಳ ಜಂಟಿ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳುವ ಉದ್ದೇಶದಿಂದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮರಾಠರು ದೇವಸ್ಥಾನಗಳ ನಿರ್ಮಾಣ, ಪುತ್ಥಳಿಗಳ ಸ್ಥಾಪನೆಗೆ ಒತ್ತು ನೀಡುವ ಬದಲು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಮರಾಠ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮರಾಠ ಸಮಾಜವು ಧೈರ್ಯ, ಶಿಸ್ತು, ರಾಷ್ಟ್ರಪ್ರೇಮಕ್ಕೆ ಹೆಸರುವಾಸಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಡಿ. ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಬಾಪಗೊಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮರಾಠ ಪ್ರಮುಖರಾದ ಪ್ರಕಾಶ ಪಾಕ್ರೆ, ಸಂಜು ಮಿಶಾಳೆ, ಸಂಭಾಜಿ ಹಲ್ಯಾಳಕರ, ವೆಂಕಟೇಶ್ ಸಾಳುಂಕೆ, ಬಾನು ಮಿರಾಶಿ, ಶಂಕರ ಬೆಳಗಾಂವಕರ, ರವಿ ತೋರಣಗಟ್ಟಿ ಇದ್ದರು. ನಿಗಮದ ಸಹಾಯಕ ನಿದೇರ್ಶಕ ರಂಜನ್ ನಾಯ್ಕ ಹಾಗೂ ಸಿಬ್ಬಂದಿ ದುರ್ಗಾನಂದ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.