ಕೊಪ್ಪಳ: ಹಂಪಿ ಪ್ರಾಧಿಕಾರದ ವ್ಯಾಪ್ತಿಯಿಂದ ಬಿಡುಗಡೆಗೆ ಆಗ್ರಹಿಸಿ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸೇರಿದಂತೆ ಕಿಷ್ಕಿಂಧಾ ಭಾಗದ ಸುಮಾರು ೧೫ ಗ್ರಾಮಗಳ ಜನರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಗಂಗಾವತಿಯ ಕಿಷ್ಕಿಂಧಾ ಭಾಗದ ೧೫ ಗ್ರಾಮಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಏನೇ ಕೆಲಸ ಮಾಡಬೇಕಾದರೂ ತೊಂದರೆಯಾಗುತ್ತಿದೆ. ಹಂಪಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕಿಷ್ಕಿಂಧಾ ಭಾಗದ ಈ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣ ಪರವಾನಗಿ, ವಿದ್ಯುತ್ ಸಂಪರ್ಕ ಸೇರಿ ಹಲವು ಮೂಲಭೂತ ಸೌಕರ್ಯಗಳಿಗೆ ಪರವಾನಗಿ ಸಿಗುತ್ತಿಲ್ಲ. ಇದರಿಂದಾಗಿ ಜನರು ಮೂಲಭೂತ ಸೌಕರ್ಯಗಳಿಗಾಗಿ ತೊಂದರೆ ಅನುಭವಿಸುವಂತಾಗಿದೆ. ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಂಪಿ ಪ್ರಾಧಿಕಾರದ ವ್ಯಾಪ್ತಿಯಿಂದ ಕಿಷ್ಕಿಂಧಾ ಭಾಗದ ಈ ಗ್ರಾಮಗಳನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯನಗರ ಸಾಮ್ರಾಜ್ಯದ ವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಪ್ರಾಧಿಕಾರ ಹಠಾವೋ, ಕಿಷ್ಕಿಂಧಾ ಬಚಾವೋ ಎಂಬುದು ಆ ಭಾಗದ ಜನರ ಆಗ್ರಹದ ಹೋರಾಟವಾಗಿದೆ. ಗಂಗಾವತಿ ತಾಲೂಕಿನ ೧೫ ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕು. ಯುನೆಸ್ಕೊ ಪಟ್ಟಿಯಲ್ಲಿ ಈ ಭಾಗ ಸೇರುವುದರಿಂದ ಪ್ರವಾಸೋದ್ಯಮ ಉತ್ತೇಜನಗೊಳ್ಳುತ್ತದೆ. ಈ ಭಾಗದ ಜನರಿಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಹುಸಿಯಾಗಿದೆ. 20 ವರ್ಷದಿಂದ ಇಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಈ ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುತ್ತೇವೆ. ಮುಂದೆ 15 ಹಳ್ಳಿಗಳ ಜನ ಸೇರಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು.