ಸಾರಾಂಶ
ಹೂವಿನಹಡಗಲಿ: ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ತಾಲೂಕು ಸಮಿತಿ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಉಪಾಧ್ಯಕ್ಷ ಸುರೇಶ ಹಲಗಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ ಅಮಿತ್ ಶಾ ಅವರನ್ನು, ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅವರ ಸಚಿವ ಸಂಪುಟದ ಹಲವರು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದನ್ನು ಲಜ್ಜೆಗೆಟ್ಟ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಸಂವಿಧಾನದ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಬಿಜೆಪಿ, ಆರ್‌ಎಸ್‌ಎಸ್ ಮನುವಾದಿ ಮನಸ್ಥಿತಿಯ ಬಣ್ಣ ಬಯಲಾಗಿದೆ. ಆ ವಿಷಯದ ಚರ್ಚೆಯಿಂದ ದೇಶದ ಗಮನ ಬೇರೆಡೆ ಸೆಳೆಯುವ ಭಾಗವಾಗಿ ದುರುದ್ದೇಶದಿಂದಲೇ ಅಮಿತ್ ಶಾ ಸಂಸತ್ತಿನಲ್ಲಿ ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು, ಇತ್ತೀಚೆಗೆ ಒಂದು ಪ್ಯಾಷನ್ ಆಗಿಬಿಟ್ಟಿದೆ. ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ, ಏಳು ಜನ್ಮ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು ಎಂದು ಅಮಿತ್ ಶಾ, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾದ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದರು.ದಲಿತ, ಹಿಂದುಳಿದವರ ಬಗ್ಗೆ ಇದ್ದ ದ್ವೇಷವನ್ನು ಅಮಿತ್ ಶಾ ಹೊರ ಹಾಕಿದ್ದಾರೆ. ಮನುಸ್ಮೃತಿಯ ಅವಮಾನವನ್ನು ಸಹಿಸುವುದಿಲ್ಲವೆಂದು ಮತ್ತೊಮ್ಮೆ ಲೋಕಸಭೆಯಲ್ಲಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದ ಅವರು, ಇದೇ ಸಂವಿಧಾನದಿಂದಲೇ ಅವರು ಅಧಿಕಾರದಲ್ಲಿರುವುದು ಎಂಬುದನ್ನು ಮರೆತು, ಆರ್‌ಎಸ್‌ಎಸ್ ಗುಲಾಮರಂತೆ ವರ್ತಿಸುತ್ತಿದ್ದಾರೆ. ಮುಂದಿನ ಜನವರಿಯಲ್ಲಿ ಸಂವಿಧಾನ ಸನ್ಮಾನ ಯಾತ್ರೆಯ ಹೆಸರಿನಲ್ಲಿ ದಲಿತ ಸಮುದಾಯವನ್ನು ಮರಳು ಮಾಡುವ ತಂತ್ರವನ್ನು ಹೆಣೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ನಾಗರಾಜಪ್ಪ, ವಿ.ಜಯ ನಾಯ್ಕ, ನಾಗರಾಜ್ ಕೊಟಿಹಾಳ್, ದಂಡೆಮ್ಮ ಹೊನ್ನಪ್ಪ ಚಲುವಾದಿ, ಹಾಲೇಶ್, ದೇವೇಂದ್ರಪ್ಪ ಇತರರು ಕಂದಾಯ ಇಲಾಖೆ ಮೇಟಿ ಅವರಿಗೆ ಮನವಿ ಸಲ್ಲಿಸಿದರು.