ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾರ್ವಜನಿಕ ರಸ್ತೆ, ಎಲೆಚಾಕನಹಳ್ಳಿ ದಲಿತರ ತೋಟ, ಇನಾಂ ಭೂಮಿಗಳನ್ನು ರಕ್ಷಿಸಲಾಗದ ಆಡಳಿತ ವ್ಯವಸ್ಥೆ ಧೋರಣೆ ಖಂಡಿಸಿ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು. ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಪಂನ ಬಸವನಪುರ ಗ್ರಾಮದ ಆಶ್ರಯ ನಿವಾಸಿಗಳಿಗಾಗಿ ನಿರ್ಮಿಸಲಾದ ಗೆಜ್ಜಲಗೆರೆ ಡೇರಿ ಎದುರಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ನಿರ್ಬಂಧಿಸಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಮಂಡ್ಯ ತಾಲೂಕು ಎಲೆಚಾಕನಹಳ್ಳಿ ಗ್ರಾಮದ ಸ.ನಂ.73, 62ರ 35 ಎಕರೆ ತೋಟ ಇನಾಂ ಭೂಮಿಯನ್ನು 21ಜನ ದಲಿತರಿಂದ ವಂಚಿಸಿ, ಕರ್ನಾಟಕ ಗೃಹ ಮಂಡಳಿಗೆ ಅಕ್ರಮ ಭೂ-ಸ್ವಧೀನ ಮಾಡಿರುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಈ ಕೂಡಲೇ ರದ್ದುಪಡಿಸಲು (ಡೀ ನೋಟಿಫೈ) ಆದೇಶಿಸಿಲು ಅನುವಾಗುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮದ ಶಿಫಾರಸ್ಸನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಎಲೆಚಾಕನಹಳ್ಳಿ ಗ್ರಾಮದ ದಲಿತರ ತುಂಡುಭೂಮಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.ಮೇಲುಕೋಟೆ ಗ್ರಾಮದ ಸ.ನಂ.68ರಲ್ಲಿ ಕಳೆದ 20 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದ ಗೀತಾ, ಮಂಜುಳಾ ಅವರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮತ್ತು ಉಪ ವಿಭಾಗದ ಮಟ್ಟದ ದಲಿತರ ಕುಂದುಕೊರತೆ ಸಭೆಗಳಲ್ಲಿ ಚರ್ಚಿತವಾಗುವ ಮದ್ದೂರು ತಾಲೂಕು ಹುರುಗಲವಾಡಿ ಗ್ರಾಮದ ಸ.ನಂ.158ರಲ್ಲಿ ಸರ್ಕಾರ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿರುವ ನಿವೇಶನ ಸಂಖ್ಯೆ 13, 14ನೇ ನಿವೇಶನದ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ 30 ಎಕರೆ ನೀರಾವರಿ ಇಲಾಖೆಯ ಸಿಡಿಎಸ್ ನಾಲಾ ಖರಾಬು ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿರುವ ಚನ್ನವೀರಣ್ಣಾರಾಧ್ಯ, ವೇಧಮೂರ್ತಿ, ರೇವಣ್ಣಾರಾಧ್ಯ ಮತ್ತಿತರರನ್ನು ಈ ಕೂಡಲೇ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಭೂಮಿಯಲ್ಲಿ ಹಿಂದಿನಿಂದಲೂ ಇದ್ದ ಬಂಡಿದಾರಿಯನ್ನು ದಲಿತ ಕರಿಯಪ್ಪ ಮತ್ತಿತರ ರೈತರು ಕೃಷಿ ಉತ್ಪನ್ನ ಸಾಗಿಸುತ್ತಿದ್ದಂತೆ ಸಮರ್ಪಕ ಬಂಡಿದಾರಿ ನಿರ್ಮಾಣ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ವೆಂಕಟಗಿರಿಯಯ್ಯ, ಶರಾವತಿ ಅಶ್ವಥ್, ಬಿ.ಆನಂದ್, ಮಹದೇವು, ಮುತ್ತುರಾ೩ಜು, ಸ್ವಾಮಿ, ಶಿವಲಿಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.